ಹಿರಿಯ ನಾಗರಿಕರಿಗೆ ನೇತ್ರ ತಪಾಸಣೆ ಉಚಿತ ಶಿಬಿರ

4 mlk
Published on

ಮೊಳಕಾಲ್ಮೂರು: ಹಿರಿಯ ನಾಗರಿಕರಿಗೆ ಉಚಿತ ಕಾನೂನು ಸಲಹೆ ಹಾಗೂ ತುರ್ತು ಸಮಸ್ಯೆಗಳ ಸ್ಪಂದನೆಗೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿರುವ ಸಹಾಯವಾಣಿ ಕೇಂದ್ರವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅಂಗವಿಕಲರ ಕಲ್ಯಾಧಿಕಾರಿ ಜೆ. ವೈಶಾಲಿ ಹೇಳಿದರು.

ಪಟ್ಟಣದ ಕ್ಷೇತ್ರ ಮಾದರಿ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರಿಗೆ ನೇತ್ರ ತಪಾಸಣೆ ಉಚಿತ ಶಿಬಿರದಲ್ಲಿ ಮಾತನಾಡಿದರು.

60 ವರ್ಷ ಮೇಲ್ಪಟ್ಟವರಿಗೆ ಆರ್ಥಿಕ ಭದ್ರತೆ, ಆರೋಗ್ಯ ಪಾಲನೆ, ಆಶ್ರಯ ಮತ್ತು ಅವರ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೃದ್ಧಾಶ್ರಮ, ಊಟ, ವಸತಿ ಸೇರಿ ಹಲವು ರೀತಿಯ ಸೌಲಭ್ಯಗಳನ್ನು ಕಲ್ಪಿಸಿವೆ. ಅವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮನೆ ಅಥವಾ ಅನ್ಯರಿಂದ ಕಿರುಕುಳ, ಹಣಕಾಸಿನ ಶೋಷಣೆ, ಮಾನಸಿಕ ಒತ್ತಡ ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾ ಕೇಂದ್ರದಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಗ್ರಾಮೀಣ ಪ್ರದೇಶದ ವೃದ್ಧರು ನಗರ ಪ್ರದೇಶದಲ್ಲಿ ಇರಲು ಬಯಸಿದರೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.

ಪಾಲಕರ ಪೋಷಣೆ, ಸಂರಕ್ಷಣೆ ಕಾಯ್ದೆ ಅನ್ವಯ ಕಳೆದ ವರ್ಷ 32 ದೂರುಗಳು ಸ್ವೀಕೃತವಾಗಿದ್ದವು. ಈ ಪೈಕಿ 15 ವಿಲೇವಾರಿಯಾಗಿವೆ. 17 ಅರ್ಜಿಗಳು ವಿಚಾರಣಾ ಹಂತದಲ್ಲಿವೆ ಎಂದು ತಿಳಿಸಿದರು.

2024 ರ ಏಪ್ರಿಲ್‌ನಿಂದ ಇಲ್ಲೀತನಕ 504 ಮಂದಿ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ಒಟ್ಟಾರೆ ಹಿರಿಯರ ಆರೈಕೆ ಮತ್ತು ಅವರ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಅನುಷ್ಠಾನಕ್ಕೆ ಆದ್ಯತೆ ಕೊಡಲಾಗಿದೆ ಎಂದು ತಿಳಿಸಿದರು.

ಟಿಎಚ್‌ಒ ಡಾ. ಮಧುಕುಮಾರ ಮಾತನಾಡಿ, ಹಿರಿಯ ನಾಗರಿಕರು ತೃಪ್ತಿಕರ ಜೀವನ ನಡೆಸಲು ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಮುಂದಾಗಿದೆ. ಕಣ್ಣಿನ ಆರೋಗ್ಯ ಸುರಕ್ಷತೆ ಬಗ್ಗೆಯೂ ಉದಾಸೀನ ತೋರಬಾರದು. ಆರೋಗ್ಯದ ದೃಷ್ಟಿಯಿಂದ ಕಾಲ ಕಾಲಕ್ಕೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ನಡೆಸಲಾಗುತ್ತಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ವಿಶೇಷವಾಗಿ ಕಣ್ಣಿನ ಪೊರೆ ಚಿಕಿತ್ಸೆಗೆ ಜಿಲ್ಲೆಯ ಆರು ತಾಲೂಕುಗಳಲ್ಲಿ ಆಯ್ದ ದಿನಾಂಕಗಳಂದು ನಡೆಸುವ ಶಿಬಿರಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು ಎಂದು ತಿಳಿಸಿದರು.

ತಾಪಂ ವ್ಯವಸ್ಥಾಪಕ ಜಿ.ಎನ್. ನಂದೀಶ, ನೇತ್ರ ತಜ್ಞ ಡಾ. ಮಂಜುನಾಥ, ನೇತ್ರಾಧಿಕಾರಿ ಪಂಚಜನ್ಯ, ಗಾದ್ರಿಪಾಲಯ್ಯ, ಶಾಂತಮ್ಮ, ಪಿ. ದಾದಾಪೀರ್, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಜ್ಯೋತಿ, ಟಿ. ಸುರೇಶ, ಶಿವಣ್ಣ, ಶಿವಲಿಂಗಮ್ಮ, ಶೇಖರಪ್ಪ, ಮಂಜುನಾಥ, ಎಂ.ಡಿ. ಹುಸೇನ್, ರಾಮಣ್ಣ, ತಿಪ್ಪೇರುದ್ರಪ್ಪ, ದಾನಸ್ವಾಮಿ, ಶರಣಪ್ಪ ಹಾಗೂ ಹಿರಿಯ ನಾಗರಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net