

ಹುಬ್ಬಳ್ಳಿ: ಹಾಡುಗಳ ನಿನಾದ, ನೆರಳು-ಬೆಳಕಿನಾಟ, ಅತ್ಯದ್ಭುತ ರ್ಯಾಂಪ್, ಇದರ ಮೇಲೆ ರೂಪದರ್ಶಿಯರು ಮತ್ತು ಮಕ್ಕಳು ಕ್ಯಾಟ್ ವಾಕ್ ಮಾಡುತ್ತಿದ್ದಂತೆ ಹುಬ್ಬಳ್ಳಿಗರು ಫಿದಾ ಆದರು.
ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ (ಐಎನ್ಐಎಫ್ಡಿ) ವತಿಯಿಂದ ನಗರದ ಖಾಸಗಿ ಹೋಟೆಲ್ನಲ್ಲಿ ಶನಿವಾರ ಏರ್ಪಡಿಸಿದ್ದ 5ನೇ ಆವೃತ್ತಿಯ ಫ್ಯಾಷನ್ ಶೋ ಹಾಗೂ ಫ್ಯಾಷನ್ ಉಡುಗೆಗಳ ಪ್ರದರ್ಶನದ ಝುಲಕ್ ಇದು.
ಒಟ್ಟು 15 ಸುತ್ತುಗಳಲ್ಲಿ ಯುವತಿಯರು ಮತ್ತು ಚಿಕ್ಕ ಮಕ್ಕಳು ಭಾಗವಹಿಸಿ, ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ವಿಭಿನ್ನವಾಗಿದ್ದ ವಸ್ತ್ರಗಳನ್ನು ಧರಿಸಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದಾಗ ನೆರೆದವರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.
ಮುಂಬೈನಿಂದ ಆಗಮಿಸಿದ್ದ ಮಾಡೆಲ್ಗಳು ಸಭಿಕರ ನೋಟವನ್ನು ಸೆರೆಹಿಡಿದರು. ಐಎನ್ಐಎಫ್ಡಿ ವಿದ್ಯಾರ್ಥಿನಿಯರು ತಯಾರಿಸಿದ್ದ ವಿವಿಧ ವಿನ್ಯಾಸದ ಉಡುಪುಗಳನ್ನು ಧರಿಸಿಯೇ ಇವರು ಹೆಜ್ಜೆ ಹಾಕಿದ್ದು ಗಮನ ಸೆಳೆಯುವಂತಿತ್ತು. ಒಟ್ಟು 16 ತಂಡಗಳು ಭಾಗವಹಿಸಿದ್ದವು. 37 ವಿದ್ಯಾರ್ಥಿನಿಯರು ವಸ್ತ್ರ ವಿನ್ಯಾಸ ಮಾಡಿದ್ದರು. ಕೋರಿಯೋಗ್ರಾಫರ್ಗಳನ್ನು ಕೂಡ ಮುಂಬೈನಿಂದ ಕರೆಯಿಸಲಾಗಿತ್ತು. ಮುಂಬೈನ ರೋಷನ್ ಕೂಡ ಹಾಡು ಹಾಡುವುದರ ಜತೆಗೆ ಅದ್ಭುತ ನಿರೂಪಣೆ ಮಾಡುವ ಮೂಲಕ ಜನರ ಮನಸ್ಸನ್ನು ಸೆರೆಹಿಡಿದಿಟ್ಟಿದ್ದರು.
ಉದ್ಘಾಟನೆ: ಐಎನ್ಐಎಫ್ಡಿ 5ನೇ ಆವೃತ್ತಿಯ ಫ್ಯಾಷನ್ ಶೋ ಹಾಗೂ ಫ್ಯಾಷನ್ ಉಡುಗೆಗಳ ಪ್ರದರ್ಶನವನ್ನು ಜಿಪಂ ಸಿಇಒ ಟಿ.ಕೆ. ಸ್ವರೂಪ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, 2ನೇ ಹಂತದ ನಗರಗಳಲ್ಲೂ ಫ್ಯಾಷನ್ ಶೋ ನಡೆಯುತ್ತಿರುವುದು ಖುಷಿಯ ವಿಚಾರ. ಐಎನ್ಐಎಫ್ಡಿ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಫ್ಯಾಷನ್ ಶೋ ಆಯೋಜಿಸುವ ಮೂಲಕ ಇನಷ್ಟು ವಿಸ್ತರಿಸುವ ಕೆಲಸ ಮಾಡುತ್ತಿದೆ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ಸ್ಮೃತಿ ಬೆಲ್ಲದ ಮಾತನಾಡಿ, ಫ್ಯಾಷನ್ ಶೋ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವುದು ಕೇಳಿ ಖುಷಿಯಾಯಿತು. ಐಎನ್ಐಎಫ್ಡಿ ಸಂಸ್ಥೆಯ ವಿದ್ಯಾರ್ಥಿಗಳು ತಯಾರಿಸಿದ ವಸ್ತ್ರ ವಿನ್ಯಾಸವು ವಿದೇಶಗಳಲ್ಲಿಯೂ ಹೆಸರು ಮಾಡಿದೆ. ಇದು ಸಂಸ್ಥೆಯ ಹೆಮ್ಮೆಯ ವಿಷಯ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕಿ ಜ್ಯೋತಿ ಬಿಡಸಾರಿಯಾ, ಸಂದೀಪ ಬಿಡಸಾರಿಯಾ, ವಿನುತಾ ಸಂದೀಪ, ವೆನಿಲಾ ತುಂಬಿಡಿ, ಭಾವನಾ ಜೈನ್ ಇತರರು ಇದ್ದರು.