ಕಣ್ಮನ ಸೆಳೆದ ‘ಅಪೂರ್ವ ನಾಣ್ಯ ಮತ್ತು ನೋಟುಗಳ ಪ್ರದರ್ಶನ’

mysore
Published on

ಮೈಸೂರು: ‘ಅಪೂರ್ವ ನಾಣ್ಯ ಮತ್ತು ನೋಟುಗಳ ಪ್ರದರ್ಶನ’ ನೋಡುಗರನ್ನು ವಿಸ್ಮಯಗೊಳಿಸಿತು. ಜತೆಗೆ, ಇತಿಹಾಸದ ತಿಳವಳಿಕೆಯೊಂದಿಗೆ ಜ್ಞಾನಾರ್ಜನೆಯನ್ನೂ ವಿಸ್ತರಿಸಿತು.


ನಗರದ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಲ್ಲಿ ಶನಿವಾರ ಆಯೋಜಿಸಿದ್ದ ಈ ವಿಶಿಷ್ಟ ಪ್ರದರ್ಶನ ಕಣ್ಮನ ಸೆಳೆಯಿತು.


ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ ಅಂಗವಾಗಿ ಹುಣಸೂರಿನ ಪ್ರಾಚೀನ ನಾಣ್ಯ ಮತ್ತು ನೋಟುಗಳ ಸಂಗ್ರಹಕಾರ ಪಿ.ಕೆ.ಕೇಶವಮೂರ್ತಿ ಅವರಿಂದ ಈ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.


ನೂರಾರು ವರ್ಷಗಳ ವಿಭಿನ್ನ, ವಿಶೇಷ ಮತ್ತು ಅಪರೂಪದ ನಾಣ್ಯಗಳು ಮತ್ತು ನೋಟುಗಳನ್ನು ಒಂದೆಡೆ ನೋಡುವ ಸುಯೋಗ ದೊರೆಯಿತು. ಇದು ಜಗತ್ತಿನ ಇತಿಹಾಸ, ಕುತೂಹಲಕರ ಸಂಗತಿಯನ್ನು ತಿಳಿದುಕೊಳ್ಳಲು ಸಹಕಾರಿ ಆಯಿತು. ಸಾರ್ವಜನಿಕರು, ಸಂಶೋಧನಾ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿ ಪುರಾತನ ವಸ್ತುಗಳನ್ನು ಕಣ್ತುಂಬಿಕೊಂಡರು.


ಕ್ರಿಸ್ತಪೂರ್ವ 5ನೇ ಶತಮಾನದಲ್ಲಿ ಬಳಕೆಗೆ ಬಂದ ಭಾರತದ ಮೊಟ್ಟ ಮೊದಲ ಪಂಚ್ಮಾರ್ಕ್ ನಾಟ್ಯಗಳು ಗಮನ ಸೆಳೆಯಿತು. ಗ್ರೀಕ್, ರೋಮನ್, ಕುಶಾನರು, ಗುಪ್ತ, ಶಾತವಾಹನ, ಕದಂಬ, ಚೋಳ, ಪಾಂಡ್ಯ ಮುಂತಾದ ಪ್ರಾಚೀನ ಸಾಮ್ರಾಜ್ಯದ ನಾಟ್ಯಗಳು ತಮ್ಮ ಇತಿಹಾಸವನ್ನು ತಿಳಿಸಿಕೊಟ್ಟವು.


ಮೊಘಲ್ ಸಾಮ್ರಾಜ್ಯದ ಅಕ್ಬರ್, ಜಹಾಂಗೀರ್, ಶಹಜಹಾನ್, ಕಛ್, ಬರೋಡ, ಗ್ವಾಲಿಯರ್, ಮೇವಾರ ಮುಂತಾದ ಭಾರತೀಯ ಸಂಸ್ಥಾನಗಳೊಂದಿಗೆ ಸ್ವಾತಂತ್ರೃ ಪೂರ್ವದ ಬ್ರಿಟಿಷರು, ಪೋರ್ಚಗೀಸರು, ಸ್ವಾತಂತ್ರೃ ಭಾರತದ ನಾಟ್ಯಗಳು, ನೋಟಗಳು ಆಕರ್ಷಿಸಿದವು. ಚಲಾವಣೆಯಿಂದ ಹಿಂತೆಗೆದುಕೊಂಡಿರುವ ನೋಟುಗಳನ್ನು ನೋಡಲು ದೊರೆಯಿತು.

mysore


ಮುದ್ರರಾಕ್ಷಸನ ಹಾವಳಿಯ ದೋಷವುಳ್ಳ ವಿಚಿತ್ರ ಆಕಾದ ನಾಣ್ಯ, ನೋಟಗಳು ವಿಶೇಷ ಎನಿಸಿದವು. ಸ್ಮರಣಾರ್ಥ ಬಿಡುಗಡೆಯಾಗಿರುವ 100 ರೂ., 150 ರೂ., 100 ರೂ., 75 ರೂ., 60 ರೂ., 50 ರೂ., 20 ರೂ. ಮತ್ತು 10 ರೂ. ಮುಖಬೆಲೆಯ ನೋಟುಗಳು ಕುತೂಹಲ ಮೂಡಿಸಿದವು.


ನೂರಾರು ದೇಶಗಳ ವೈವಿಧ್ಯಮಯ ನಾಣ್ಯ, ನೋಟಗಳು ವೀಕ್ಷಣೆಗೆ ಲಭ್ಯ ಇತ್ತು. ತಾಮ್ರ, ಬೆಳ್ಳಿ, ಚಿನ್ನ, ಸೀಸ, ಹಿತ್ತಾಳೆ ಮುಂತಾದ ಲೋಹಗಳ ನಾಣ್ಯಗಳು ಕರೆನ್ಸಿ ಲೋಕವನ್ನು ಪರಿಚಯಿಸಿದವು. ಇತ್ತೀಚಿನ ಪ್ಲಾಸ್ಟಿಕ್ ನೋಟಗಳು ಆಧುನಿಕತೆಯನ್ನು ತಿಳಿಸಿಕೊಟ್ಟವು. ಟಿಪ್ತು ಸುಲ್ತಾನದ ಕಾಲದ 2 ಪೈಸ ನಾಣ್ಯದಲ್ಲಿ ಆನೆಗಳ ಚಿತ್ರ, ಉರ್ದು ಲಿಪಿ ವಿಶಿಷ್ಟವಾಗಿತ್ತು.

‘40 ವರ್ಷದಿಂದ ಪುರಾತನ ನಾಣ್ಯಗಳು, ನೋಟಗಳು ಸಂಗ್ರಹಿಸಿದ್ದು, 1992ರಲ್ಲಿ ಮೊದಲ ಪ್ರದರ್ಶನ ಆಯೋಜನೆ ಮಾಡಲಾಯಿತು. ಇದು 161ನೇ ಪ್ರದರ್ಶನವಾಗಿದೆ. ಅಫ್ಗಾನಿಸ್ತಾನದ ಕಂದಹಾರದಲ್ಲಿರುವ ವಸ್ತು ಸಂಗ್ರಹಾಲಯವನ್ನು ದ್ವಂಸ ಮಾಡಿದಾಗ ದೊರೆತ ಪುರಾತನ ನಾಣ್ಯ ಇಲ್ಲಿ ನೋಡಲು ಲಭ್ಯ ಇದೆ.

ಉಳಿದಂತೆ 6ನೇ ಶತಮಾನದಿಂದ ನಾಣ್ಯಗಳಿವೆ ಎಂದು ಪ್ರಾಚೀನ ನಾಣ್ಯ ಮತ್ತು ನೋಟುಗಳ ಸಂಗ್ರಹಕಾರ ಪಿ.ಕೆ.ಕೇಶವಮೂರ್ತಿ ತಿಳಿಸಿದರು. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯಕ್ತ ಎ.ದೇವರಾಜು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net