

ಹುಬ್ಬಳ್ಳಿ: ಬದುಕಿನಲ್ಲಿ ನಾವು ಎಷ್ಟೇ ಹಣ, ಅಂತಸ್ತು ಗಳಿಸಿದ್ದರೂ ಅದು ಈ ಸಮಾಜದಿಂದಲೇ ಆಗಿರುತ್ತದೆ. ಹಾಗಾಗಿ ಮನುಷ್ಯರಾದವರು ಪಡೆದುಕೊಂಡಿದ್ದರಲ್ಲಿ ಒಂದಿಷ್ಟನ್ನು ಮತ್ತೆ ಸಮಾಜಕ್ಕಾಗಿ ಕೊಡುವ ಮನಸ್ಸು ಮಾಡಬೇಕು ಎಂದು ಯುನೈಟೆಡ್ ಸೆಕ್ಯೂರಿಟಿ ಫೋರ್ಸ್ ಎಂಡಿ ಸಂತೋಷ ಇಂಚಲ ಹೇಳಿದರು.
ಇಲ್ಲಿಯ ಪೆಂಡಾರ್ ಗಲ್ಲಿಯ ಸರ್ಕಾರಿ ಶಾಲೆಯಲ್ಲಿ ಬುಧವಾರ ಪ್ರೌಢಶಾಲೆ ವಿದ್ಯಾಥಿರ್ಗಳಿಗಾಗಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.
ಸಮಾಜ ಸೇವೆ ಎಂಬುದು ಎಲ್ಲರ ಕರ್ತವ್ಯವಾಗಬೇಕು. ಅಂದಾಗಲೇ ನಾವೆಲ್ಲ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಲು ಸಾಧ್ಯ ಎಂದು ಹೇಳಿದರು.
ವಿವೇಕಾನಂದ ಆಸ್ಪತ್ರೆಯ ವೈದ್ಯಕಿಯ ಮುಖ್ಯಸ್ಥೆ ಡಾ. ಮಂಜುಳಾ ಹುಗ್ಗಿ ಶಿಬಿರ ಉದ್ಘಾಟಿಸಿ ಮಾತನಾಡಿ, ಕಣ್ಣು ದೇಹದ ಮುಖ್ಯ ಅಂಗ. ಇದನ್ನು ಕಾಪಾಡಿಕೊಳ್ಳಬೇಕು. ಏನೇ ಸಮಸ್ಯೆ ಇದ್ದರೂ ವೈದ್ಯರು ತಪಾಸಣೆ ಮಾಡಿ ಪರಿಹಾರ ನೀಡಲಿದ್ದು, ಶಿಬಿರದ ಪ್ರಯೋಜನ ಪಡೆಯಬೇಕೆಂದು ಹೇಳಿದರು.
ಪ್ರೌಢಶಾಲೆ ಎಂದರೆ ಅದು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ, ಮುಂದೆ ಏನಾಗಬೇಕು ಎಂದುಕೊಂಡು ಈಗಿನಿಂದಲೇ ತಯಾರಿ ಮಾಡಿಕೊಂಡರೆ ಗುರಿ ತಲುಪುವುದು ಸುಲಭವಾಗಲಿದೆ ಎಂದರು.
ವಿಜಯವಾಣಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಅವರು ಮಾತನಾಡಿ, ವಿದ್ಯಾಥಿರ್ಗಳ ದೃಷ್ಟಿ ಹಾಗೂ ದೃಷ್ಟಿಕೋನ ಸುಂದರವಾಗಿರಬೇಕು ಎನ್ನುವ ಕಾರಣಕ್ಕೆ ಇಂತಹ ಸೇವಾ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಸಮಾಜದಲ್ಲಿ ಬದಲಾವಣೆ ತರುವ ಈ ಕಾರ್ಯಕ್ಕೆ ಹಲವು ಸಂಸ್ಥೆಗಳು ಸ್ವ ಇಚ್ಛೆಯಿಂದ ಕೈಜೋಡಿಸಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರೌಢಶಾಲೆಯ 8, 9 ಮತ್ತು 10ನೇ ತರಗತಿಯ ಸುಮಾರು 300ಕ್ಕೂ ಹೆಚ್ಚು ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡು ಕಣ್ಣು ತಪಾಸಣೆ ಮಾಡಿಸಿಕೊಂಡರು. ಕೆಲವು ಮಕ್ಕಳಿಗೆ ದೂರದೃಷ್ಟಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅವರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಯಿತು. ಅಲ್ಲದೇ ಕಣ್ಣುಗಳ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.
ಕನ್ನಡದ ನಂ. 1 ದಿನಪತ್ರಿಕೆ "ವಿಜಯವಾಣಿ' ಮಾಧ್ಯಮ ಸಹಯೋಗದಲ್ಲಿ ಯುನೈಟೆಡ್ ಸೆಕ್ಯೂರಿಟಿ ಫೋರ್ಸ್, ಕಿತ್ತೂರು ರಾಣಿ ಚನ್ನಮ್ಮ ಸೆಕ್ಯೂರಿಟಿ ಸವಿರ್ಸಸ್ ಪೆ. ಲಿಮಿಟೆಡ್ ಹಾಗೂ ವಿವೇಕಾನಂದ ಆಸ್ಪತ್ರೆ ವತಿಯಿಂದ ಪ್ರೌಢಶಾಲೆ ವಿದ್ಯಾಥಿರ್ಗಳಿಗಾಗಿ ಉಚಿತ ನೇತ್ರ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.
ನೇತ್ರ ತಜ್ಞೆ ಡಾ. ಲಕ್ಷ್ಮಿ ಗುಮಾಸ್ತೆ ಅವರು ಶಿಬಿರದ ನೇತೃತ್ವ ವಹಿಸಿ ಮಾರ್ಗದರ್ಶನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕಿ ಡಿ.ಪಿ. ಹಿರೇಗೌಡ್ರ ಮಾತನಾಡಿದರು. ಎಸ್.ಎನ್. ಕೋಷ್ಠಿ, ಆರ್.ಡಿ. ಗಾಡಿವಡ್ಡರ್, ಶ್ವೇತಾ ರಾಯ್ಕರ ಇತರರು ಪಾಲ್ಗೊಂಡಿದ್ದರು.
ವಿದ್ಯಾಥಿರ್ಗಳು ಪ್ರಾರ್ಥನೆ ಹಾಡಿದರು. ಎಂ.ಎಸ್. ಮುದಕನಗೌಡ್ರ ಸ್ವಾಗತಿಸಿದರು. ಎನ್.ಎಚ್. ಹಾಲಬಾವಿ ಕಾರ್ಯಕ್ರಮ ನಿರೂಪಿಸಿದರು. ಎಚ್.ಎನ್. ಹಣಬರಟ್ಟಿ ವಂದಿಸಿದರು.