ವಿಜೃಂಭಣೆಯ ರಂಗನಾಥಸ್ವಾಮಿ ರಥೋತ್ಸವ

18arsph1ep
Published on

ಅರಸೀಕೆರೆ: ತಾಲೂಕಿನ ಸುಕ್ಷೇತ್ರ ಗುತ್ತಿನಕೆರೆ ಶ್ರೀ ರಂಗನಾಥಸ್ವಾಮಿ ರಥೋತ್ಸವ ಇತ್ತೀಚೆಗೆ ವಿಜೃಂಭಣೆಯಿಂದ ನೆರವೇರಿತು.
ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಯಿತು. ಮೂಡಲಗಿರಿ ತಿಮ್ಮಪ್ಪಸ್ವಾಮಿ, ಯಳವಾರೆ ಹುಚ್ಚಮ್ಮದೇವಿ, ಹಾರ‌್ನಳ್ಳಿ ಕೋಡಮ್ಮದೇವಿ, ಹುಲ್ಲೇನಹಳ್ಳಿ ಚಿಕ್ಕಮ್ಮದೇವರುಗಳ ಸಮ್ಮುಖದಲ್ಲಿ ರಂಗನಾಥಸ್ವಾಮಿಯನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಬಳಿಕ ಬಣ್ಣ ಬಣ್ಣದ ಬಟ್ಟೆಗಳಿಂದ, ವಿಶೇಷ ಹೂಗಳಿಂದ ಶೃಂಗರಿಸಲಾಗಿದ್ದ ರಥದಲ್ಲಿ ಪ್ರತಿಷ್ಠಾಪಿಸಿ ಶಾಸ್ತ್ರೋಕ್ತ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.


ಭಕ್ತಾರು ರಥದ ಗಾಲಿಗೆ ತೆಂಗಿನಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಗೋವಿಂದನ ನಾಮ ಸ್ಮರಣೆಯೊಂದಿಗೆ ರಥದ ಹಗ್ಗವನ್ನು ಎಳೆಯುತ್ತಿದ್ದಂತೆ ಭಕ್ತರು ಬಾಳೆಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು.


ದೇವಾಲಯ ಸಮಿತಿಯಿಂದ ಪಾನಕ, ಫಲಾಹಾರ ವಿತರಿಸಲಾಯಿತು. ರಥೋತ್ಸವದ ಬಳಿಕ ವಸಂತೋತ್ಸವ, ಮಣೇವು ಸೇವೆ, ಮಹಾಮಂಗಳಾರತಿ ಜರುಗಿತು. ಸಂಜೆ ಗಂಗಾಸ್ನಾನದ ನಂತರ ದೇವರಿಗೆ ಉಯ್ಯಲೆ ಉತ್ಸವವನ್ನು ಏರ್ಪಡಿಸಲಾಗಿತ್ತು. ಕನಕಂಚೇನಹಳ್ಳಿ, ಕೋಡಿಮಠ, ಹಾರನಹಳ್ಳಿ, ಹೆಬ್ಬಾರನಹಳ್ಳಿ, ಹಬ್ಬನಘಟ್ಟ, ದೊಡ್ಡೇನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ರಥೋತ್ಸವದಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net