

ಬಾಳೆಹೊನ್ನೂರು: ಜಿಲ್ಲೆಯಲ್ಲಿಯೇ ಅತೀ ದೊಡ್ಡ ಗಣೇಶೋತ್ಸವದಲ್ಲಿ ಒಂದಾದ ಇಲ್ಲಿನ ವಿದ್ಯಾಗಣಪತಿ ಸೇವಾ ಸಮಿತಿ 15 ದಿನಗಳಿಂದ ಆಯೋಜಿಸಿದ್ದ 66ನೇ ಸಾರ್ವಜನಿಕ ಗಣೇಶೋತ್ಸವಕ್ಕೆ ವೈಭವದ ತೆರೆ ಬಿದ್ದಿದೆ.
ಗಣೇಶೋತ್ಸವದ ಅಂಗವಾಗಿ ಗಣೇಶನ ಪ್ರತಿಷ್ಠಾಪನೆ, ಗಣಹೋಮ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಥಳೀಯರು ನಡೆಸಿಕೊಟ್ಟ ಸುಗಮ ಸಂಗೀತ, ಭರತನಾಟ್ಯ, ನೃತ್ಯರೂಪಕ, ಕನ್ನಡ, ತುಳು ನಾಟಕ, ಯಕ್ಷಗಾನ, ಆರ್ಕೆಸ್ಟ್ರಾ, ವಿನೂತನ ಮಾದರಿಯ ನೃತ್ಯ ಕಾರ್ಯಕ್ರಮ, ಶಾಲಾ ಮಕ್ಕಳ ಜಾನಪದ ಹಾಗೂ ಸಿನಿಮಾ ನೃತ್ಯ ಸ್ಪರ್ಧೆ, ಸಾರ್ವಜನಿಕರ ನೃತ್ಯ, ಗಾಯನ ಸ್ಪರ್ಧೆಗಳು ಸೇರಿದಂತೆ ವಿವಿಧ ನಟ, ಕಲಾವಿದರ ಕಾರ್ಯಕ್ರಮಗಳು ಭಕ್ತರ ಮನಸೂರೆಗೊಂಡವು.
ವಿಸರ್ಜನಾ ಮಹೋತ್ಸವದ ದಿನವಾದ ಶನಿವಾರ ಆಯೋಜಿಸಿದ್ದ ಅನ್ನ ಸಂತರ್ಪಣೆಯಲ್ಲಿ 15 ಸಾವಿರಕ್ಕೂ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಅನ್ನದಾನ ಸಮಿತಿ ಪ್ರಮುಖರಾದ ಎಂ.ಎಸ್.ಅರುಣೇಶ್, ಸಮಿತಿ ಅಧ್ಯಕ್ಷ ಟಿ.ಆರ್.ಧರ್ಮಪ್ಪಗೌಡ ನೇತೃತ್ವದಲ್ಲಿ ಸಮಿತಿಯ ಸದಸ್ಯರು ಅನ್ನ ಸಂತರ್ಪಣೆ ಸೇವೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು. ಅರ್ಚಕ ಕೆ.ಎಸ್.ಪ್ರಕಾಶ್‌ಭಟ್ ಧಾರ್ಮಿಕ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು.