ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತೀವ್ರ ಮುನ್ನೆಚ್ಚರಿಕೆ

21-hvr-01
Published on

ಹಾವೇರಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ತಾಲೂಕಿನ ಎಲ್ಲ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಹಾಗೂ ವೈದ್ಯಕೀಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ತಹಸೀಲ್ದಾರ್ ಶಂಕರ ಜಿ.ಎಸ್. ಸೂಚಿಸಿದರು.

ಬಿಇಒ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಸೂಕ್ತ ಆಸನದ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಿತ ಪ್ರದೇಶದಲ್ಲಿ ಯಾವುದೇ ಹೊರಗಿನ ವ್ಯಕ್ತಿಗಳ ಪ್ರವೇಶಕ್ಕೆ ಅವಕಾಶವಿಲ್ಲದಂತೆ ಕ್ರಮವಹಿಸಬೇಕು. ಪ್ರೌಢಶಿಕ್ಷಣ ಮಂಡಳಿಯ ಮಾರ್ಗಸೂಚಿಯಂತೆ ಮಾರ್ಗಾಧಿಕಾರಿ, ಕೊಠಡಿ ಮೇಲ್ವಿಚಾರಕರನ್ನೊಳಗೊಂಡಂತೆ ನಿಯೋಜಿತ ಅಧಿಕಾರಿಗಳು ತಮಗೆ ವಹಿಸಿದ ಪರೀಕ್ಷಾ ಕೆಲಸಗಳನ್ನು ಅಚ್ಚುಕಟ್ಟಾಗಿ ಯಾವುದೇ ಲೋಪವಿಲ್ಲದಂತೆ ಕಾರ್ಯ ನಿರ್ವಹಿಸಬೇಕು. ಪರೀಕ್ಷಾ ಕೊಠಡಿಯೊಳಗೆ ವಿದ್ಯಾರ್ಥಿಗಳ ನಡುವೆ ಗರಿಷ್ಠ ಅಂತರವಿರುವಂತೆ ನೋಡಿಕೊಳ್ಳಬೇಕು ಎಂದರು.

ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಹಾಗೂ ಇಲೆಕ್ಟ್ರಾನಿಕ್ ಉಪಕರಣಗಳಿಗೆ ನಿಷೇಧವಿರುವುದರಿಂದ ಒಳಗಡೆ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಈ ಉದ್ದೇಶಕ್ಕಾಗಿ ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಇವರ ಬಳಿ ವಿದ್ಯಾರ್ಥಿಗಳು ತಮ್ಮ ಫೋನ್​ಗಳನ್ನು ನೀಡಬೇಕು. ಈ ನಿಯಮವನ್ನು ಅಚ್ಚುಕಟ್ಟಾಗಿ ಪಾಲಿಸಬೇಕು ಎಂದರು.

ಪರೀಕ್ಷಾ ಕೇಂದ್ರದೊಳಗೆ ಹೆಲ್ತ್​ಡೆಸ್ಕ್ ಹಾಗೂ ಕೇಂದ್ರಗಳ ಸುತ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು. ಎಲ್ಲ ಕೇಂದ್ರಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳು ಸರಿಯಾಗಿವೇ ಇಲ್ಲವೇ ಎಂದು ಪರಿಶೀಲಿಸಬೇಕು. ಮೊದಲ ದಿನದ ಪರೀಕ್ಷೆಯಲ್ಲಿ ನಕಲು ನಡೆಯದಂತೆ ಅಗತ್ಯ ಕ್ರಮಕೈಗೊಂಡರೆ ಉಳಿದ ಪರೀಕ್ಷೆಗಳಲ್ಲಿ ನಕಲನ್ನು ಸುಲಭವಾಗಿ ತಡೆಗಟ್ಟಬಹುದು. ಪರೀಕ್ಷೆ ಕುರಿತಂತೆ ಯಾವ ಅಧಿಕಾರಿಗಳೂ ನಿಷ್ಕಾಳಜಿ ತೋರಿಸಬಾರದು. ವಿದ್ಯಾರ್ಥಿಗಳು ಯಾವುದೇ ರೀತಿಯ ಗೊಂದಲಕ್ಕೊಳಗಾಗದೇ ಪರೀಕ್ಷೆ ಬರೆಯಲು ಪ್ರೇರೇಪಿಸಬೇಕು ಎಂದರು.

ಬಿಇಒ ಎಂ.ಎಚ್. ಪಾಟೀಲ ಮಾತನಾಡಿ, ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ತಲುಪಿಸಲು ಐದು ಮಾರ್ಗಾಧಿಕಾರಿಗಳ ತಂಡ ರಚಿಸಲಾಗಿದೆ. ಮೊಬೈಲ್ ಸಂಪೂರ್ಣ ನಿಷೇಧಿಸಿದ್ದು, ಮುಖ್ಯಪರೀಕ್ಷಾ ಮೇಲ್ವಿಚಾರಕರು ಮಾತ್ರ ಸಾಮಾನ್ಯ ಬೇಸಿಕ್ ಮೊಬೈಲ್ ಬಳಸಬೇಕು. ಕರೊನಾ ಮುಂಜಾಗ್ರತಾ ಕ್ರಮವಾಗಿ ನಗರಸಭೆ, ಪಪಂ, ಗ್ರಾಪಂನವರಿಗೆ ಪರೀಕ್ಷಾ ಕೇಂದ್ರಗಳ ಸುತ್ತಲೂ ಫಾಗಿಂಗ್, ಬ್ಲಿಚಿಂಗ್ ಪೌಡರ್ ಸಿಂಪರಣೆ ಮಾಡುವಂತೆ ತಿಳಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಆರೋಗ್ಯ ಹಾಗೂ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ನಗರದಲ್ಲಿರುವ ಸೇಂಟ್ ಆನ್ಸ್ ಪ್ರೌಢಶಾಲೆ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಜಿಲ್ಲೆಯ ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಹಾಗಾಗಿ ಆ ಎರಡು ಕೇಂದ್ರಗಳನ್ನು ಸೂಕ್ಷ್ಮ ಕೇಂದ್ರಗಳೆಂದು ಪರಿಗಣಿಸಿ ಹೆಚ್ಚಿನ ನಿಗಾವಹಿಸಲಾಗುತ್ತದೆ ಎಂದರು.

ಸಭೆಯಲ್ಲಿ ತಾಪಂ ಇಒ ಡಿ. ಬಸವರಾಜಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಸ್. ಭಗವಂತಗೌಡ್ರ, ಟಿಎಚ್​ಇ ಡಾ. ಪ್ರಭಾಕರ ಕುಂದೂರ, ಪಿಎಸ್​ಐ ಪ್ರಕಾಶ ನಂದಿ, ತಾಲೂಕಾ ಪರೀಕ್ಷಾ ನೋಡಲ್ ಅಧಿಕಾರಿ ಸಿದ್ದರಾಜು ಇತರರಿದ್ದರು.

ಪರೀಕ್ಷಾ ಕೇಂದ್ರಗಳ ವಿವರ: ಪರೀಕ್ಷೆಗೆ ತಾಲೂಕಿನಾದ್ಯಂತ 13 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ನಗರದ ಮುನ್ಸಿಪಲ್ ಹೈಸ್ಕೂಲ್, ಎಸ್​ಎಂಎಸ್ ಪ್ರೌಢಶಾಲೆ, ಹುಕ್ಕೇರಿಮಠ ಪ್ರೌಢಶಾಲೆ, ಸೇಂಟ್ ಆನ್ಸ್ ಪ್ರೌಢಶಾಲೆಯಲ್ಲಿ 2, ಎಲ್.ಇ.ಎಂ.ಎಸ್, ಹೊಸರಿತ್ತಿಯ ಜಿವಿ ಹಳ್ಳಿಕೇರಿ, ಗುತ್ತಲದ ಎಸ್​ಆರ್​ಎಸ್​ಎಚ್​ಎಸ್, ದೇವಗಿರಿಯ ಮಹಾತ್ಮ ಗಾಂಧಿ ಪ್ರೌಢಶಾಲೆ, ಕಾಟೇನಹಳ್ಳಿಯ ಸರ್ಕಾರಿ ಪ್ರೌಢಶಾಲೆ, ನೆಗಳೂರಿನ ಎಂಡಿಆರ್​ಎಸ್, ಕಬ್ಬೂರಿನ ಸರ್ಕಾರಿ ಪ್ರೌಢಶಾಲೆ, ಕರ್ಜಗಿಯ ಎಂಎಂಡಿಆರ್​ಎಸ್ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.

3,623 ವಿದ್ಯಾರ್ಥಿಗಳು: ಈ ವರ್ಷ ತಾಲೂಕಿನಲ್ಲಿ 69 ಶಾಲೆಯ 3,623 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 1,605 ಗಂಡು ಹಾಗೂ 1,637 ಹೆಣ್ಣು ಮಕ್ಕಳು ಪರೀಕ್ಷೆ ಎದುರಿಸಲು ನೋಂದಾಯಿಸಿಕೊಂಡಿದ್ದಾರೆ. ಕನ್ನಡ ಮಾಧ್ಯಮದ 48 ಶಾಲೆಯ 1,144 ಗಂಡು ಹಾಗೂ 1,114 ಹೆಣ್ಣು ಮಕ್ಕಳು ಸೇರಿ 2,258 ವಿದ್ಯಾರ್ಥಿಗಳು, ಇಂಗ್ಲಿಷ್ ಮಾಧ್ಯಮದ 15 ಶಾಲೆಯ 395 ಗಂಡು ಹಾಗೂ 285 ಹೆಣ್ಣು ಮಕ್ಕಳು ಸೇರಿ 680 ವಿದ್ಯಾರ್ಥಿಗಳು, ಉರ್ದು ಮಾಧ್ಯಮದ 6 ಶಾಲೆಯ 66 ಗಂಡು ಹಾಗೂ 238 ಹೆಣ್ಣು ಮಕ್ಕಳು ಸೇರಿ 304 ವಿದ್ಯಾರ್ಥಿಗಳು ಹಾಗೂ ಖಾಸಗಿಯ 381 ಅಭ್ಯರ್ಥಿಗಳು ಪರೀಕ್ಷೆಗಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಬಿಇಒ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net