ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ ಮುಖ್ಯ

IMG-20230913-WA0046
ಜುಟ್ಟನಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಗಮನ ಸೆಳೆಯಿತು. ಪುಷ್ಪಲತಾ ಉಮೇಶ್, ಪಿ.ಕೆ.ಮಂಜೇಗೌಡ, ಸೋಮನಾಥ್, ಕೆ.ಎಂ.ಪ್ರಕಾಶ್, ಯಾದವರಾಜ್ ಇದ್ದರು.
Published on

ಶ್ರವಣಬೆಳಗೊಳ: ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಲತಾ ಉಮೇಶ್ ಹೇಳಿದರು.

ಹೋಬಳಿಯ ಜುಟ್ಟನಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪ್ರೌಢಶಾಲೆಗಳ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಇಂತಹ ವೇದಿಕೆ ಮೂಲಕ ಅನಾವರಣಿಗೊಳಿಸಬಹುದಾಗಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ ಕೂಡ ಮುಖ್ಯವಾಗಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಇದು ಸಹಕಾರಿ ಎಂದು ಹೇಳಿದರು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮನಾಥ್ ಮಾತನಾಡಿ, ಶೈಕ್ಷಣಿಕ ಚಟುವಟಿಕೆ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸೋಲು-ಗೆಲುವನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಂಡರೆ, ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಹೇಳಿದರು.

ಸ್ಪರ್ಧೆಯಲ್ಲಿ 15 ಪ್ರೌಢಶಾಲೆಗಳ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕನ್ನಡ, ಇಂಗ್ಲಿಷ್, ಹಿಂದಿ ಭಾಷಣ, ಸಂಸ್ಕೃತ, ಉರ್ದು ಧಾರ್ಮಿಕ ಪಠಣ, ಜಾನಪದ ಗೀತೆ, ಭಾವಗೀತೆ, ಭರತನಾಟ್ಯ, ಛದ್ಮವೇಷ, ಚಿತ್ರಕಲೆ, ಮಿಮಿಕ್ರಿ, ಚರ್ಚಾ ಸ್ಪರ್ಧೆ, ರಂಗೋಲಿ, ಗಜಲ್, ಕವನ, ಪದ್ಯ ವಾಚನ, ಆಶು ಭಾಷಣ, ಕವ್ವಾಲಿ ಹಾಗೂ ಜಾನಪದ ಸಮೂಹ ನೃತ್ಯ, ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪರ್ಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪಿ.ಕೆ.ಮಂಜೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಗೀತಾಮಣಿ, ಪ್ರಸನ್ನಕುಮಾರ್, ಅಶೋಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಸಿ.ನಂಜೇಗೌಡ, ಸಿಇಒ ಪ್ರಕಾಶ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಬಿ.ಕೆ.ಸತೀಶ್, ನಿರ್ದೇಶಕ ಬಿ.ಎನ್.ನಾಗೇಶ್, ಇಸಿಒ ಯಾದವರಾಜ್, ಮುಖ್ಯ ಶಿಕ್ಷಕರಾದ ಕೆ.ಎಂ.ಪ್ರಕಾಶ್, ಎಚ್.ಎಚ್.ಸತೀಶ್, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ಪುಟ್ಟಸ್ವಾಮಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net