

ಕೈಲಾಂಚ : ಶಿಕ್ಷಣ ಜ್ಞಾನ ನೀಡಿದರೆ, ಪಠ್ಯೇತರ ಚಟುವಟಿಕೆಗಳು ಸಾಮಾಜಿಕ ಬದುಕಿನ ಚಿಂತನೆ ಮೈಗೂಡಿಸಿಕೊಳ್ಳಲು ಸಹಕಾರಿಯಾಗಿವೆ ಎಂದು ಹುಲಿಕೆರೆ-ಗುನ್ನೂರು ಗ್ರಾಪಂ ಅಧ್ಯಕ್ಷ ಗಿರೀಶ್ ತಿಳಿಸಿದರು.
ಕೈಲಾಂಚ ಹೋಬಳಿಯ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಹುಲಿಕೆರೆ-ಗುನ್ನೂರು ಗ್ರಾಪಂನಿಂದ ಪ್ಲಾಸ್ಟಿಕ್ ತ್ಯಾಜ್ಯಮುಕ್ತ ಆಂದೋಲನ ಮತ್ತು ಬೆಂಗಳೂರಿನ ಕ್ರೈಸ್ಟ್ ಕಾಲೇಜು ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರದ ಶ್ರಮದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾಜಿಕ ಸೇವಾ ಕಾರ್ಯಗಳು ಉತ್ತಮ ಸಮಾಜ ನಿರ್ಮಾಣದ ಅಡಿಗಲ್ಲಾಗುತ್ತವೆ. ವಿದ್ಯಾರ್ಥಿಗಳು ಶಿಕ್ಷಣದ ತೆಯಲ್ಲೇ ಸಮುದಾಯ, ಸಾಮಾಜಿಕ ಸೇವಾ ಚಟುವಟಿಕೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಶಿಕ್ಷಣ ಹೇಗೆ ಮುಖ್ಯವೋ ಹಾಗೆ ಪಠ್ಯೇತರ ಚಟುವಟಿಕೆಗಳೂ ಮುಖ್ಯ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಚಟುವಟಿಕೆ ತಿಳಿಯುವ ಉದ್ದೇಶದಿಂದ ಶಿಕ್ಷಣ ಇಲಾಖೆ ಹಮ್ಮಿಕೊಳ್ಳುವ ಸೇವಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದರು.
ಪಿಡಿಒ ಶಶಿರೇಖಾ ಮಾತನಾಡಿ, ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದಕ್ಕಿಂತ ಹೊರಗಿನ ವಾತಾವರಣದಲ್ಲಿ ಬಹಳಷ್ಟು ಕಲಿಯಬೇಕಿದೆ. ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಗೆ ಸಹಕಾರ, ಸಹಬಾಳ್ವೆ, ಸಮಾಜದಲ್ಲಿ ಜನರ ತೆ ನಡೆದುಕೊಳ್ಳುವ ರೀತಿ, ನೀತಿ, ಪರಿಸರ ಕಾಳಜಿ ತಿಳಿಸುತ್ತದೆ. ಜೀವನದಲ್ಲಿ ಉತ್ತಮ ಪ್ರಜೆಯಾಗಿ ಬದುಕು ರೂಪಿಸುವ ಪಾಠ ಕಲಿಸುತ್ತದೆ ಎಂದರು.
ಕ್ರೈಸ್ಟ್ ಅಕಾಡೆಮಿ ಎನ್‌ಎಸ್‌ಎಸ್ ಅಧಿಕಾರಿ ನವೀನ್ ಮಾತನಾಡಿ, ಪ್ರತಿವರ್ಷ ರಾಷ್ಟ್ರೀಯ ಸೇವಾ ಯೋಜನೆಯಿಂದ ವಿವಿಧ ಸ್ಥಳಗಳಲ್ಲಿ ಶಿಬಿರ ಆಯೋಜಿಸಲಾಗುತ್ತಿದೆ. ಶಿಬಿರದಲ್ಲಿ ಸ್ವಚ್ಛತೆ, ಆರೋಗ್ಯ, ಪರಿಸರ ಜಾಗೃತಿ ಬಗ್ಗೆ ಶ್ರಮದಾನ, ಬೀದಿ ನಾಟಕಗಳ ಮೂಲಕ ಅರಿವು ಮೂಡಿಸಲಾಗುತ್ತದೆ ಎಂದರು.
ಭೀಮೇಶ್ವರ ದೇವಾಲಯ ಮತ್ತು ಅಕ್ಕಪಕ್ಕದಲ್ಲಿ ಶ್ರಮದಾನ ನಡೆಸಿ ಕಸ ಸಂಗ್ರಹಿಸಿಮ ವಿಲೇ ಮಾಡಲಾಯಿತು. ಬೆಟ್ಟಕ್ಕೆ ಬಂದ ಭಕ್ತರಿಗೆ ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಗ್ರಾಪಂ ಸಿಬ್ಬಂದಿ ತಿಳಿವಳಿಕೆ ಹೇಳಿದರು.
ಕ್ರೈಸ್ಟ್ ಅಕಾಡೆಮಿ ಪ್ರಾಂಶುಪಾಲ ಫಾ.ಆಂಟೋನಿ ಡೇವಿಸ್, ಗ್ರಾಪಂ ಉಪಾಧ್ಯಕ್ಷೆ ಚಿಕ್ಕತಾಯಮ್ಮ, ಕಾರ್ಯದರ್ಶಿ ಅರುಣ್‌ಕುಮಾರ್, ಬಿಲ್ ಕಲೆಕ್ಟರ್ ರೇಣುಕಯ್ಯ, ಸಿಬ್ಬಂದಿ ದೀಪು, ನಿರಂಜನ್, ಪುಟ್ಟಸ್ವಾಮಿ, ಸಿದ್ದಪ್ಪಾಜಿ, ನಾಗೇಶ್‌ನಾಯ್ಕ, ಪುಷ್ಪಾ, ರಾಧಾ, ಕುಮಾರಸ್ವಾಮಿ, ಪ್ರೇಮಾ, ಲಿಖಿತ್, ಮಧು, ಕುಮಾರ್, ರಶ್ಮಿ ಇದ್ದರು.