ದೈಹಿಕ, ಮಾನಸಿಕ ಆರೋಗ್ಯಕ್ಕೆ ಪಠ್ಯೇತರ ಚಟುವಟಿಕೆ ಸಹಕಾರಿ

KND BESIGE SHIBHIRA
Published on

ಕುಂದಗೋಳ: ಮಕ್ಕಳಿಗೆ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಬೆಳೆಯಲು ಮಲ್ಲಗಂಬ ಕ್ರೀಡೆ ಮುಖ್ಯವಾಗಿದೆ ಎಂದು ವರದಶ್ರೀ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡೇರ ಹೇಳಿದರು.

ತಾಲೂಕಿನ ಹರ್ಲಾಪುರ ಗ್ರಾಮದ ಜಾನಪದ ಕ್ರೀಡಾ ರಂಗ ಕುಟೀರದಲ್ಲಿ ಏ. 6ರಿಂದ 21 ರವರೆಗೆ ಆಯೋಜಿಸಿರುವ ರಾಜ್ಯಮಟ್ಟದ ಮಕ್ಕಳ ಮಲ್ಲಕಂಬದ ಜಾನಪದ ಬೇಸಿಗೆ ಶಿಬಿರವನ್ನು ಜಗ್ಗಲಗಿ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳು ಸದೃಢ ಮತ್ತು ಆರೋಗ್ಯವಂತರಾಗಿ ಬೆಳೆಯಲು ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಲಿವೆ. ಪಾಲಕರು ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗುವುದನ್ನಷ್ಟೇ ಬೆಳವಣಿಗೆ ಎಂದು ತಿಳಿದುಕೊಂಡಿದ್ದಾರೆ. ಉತ್ತಮ ಆರೋಗ್ಯ ಹೊಂದಲು ಮನೆಯಿಂದ ಹಲ್ಲು ತಿಕ್ಕುವ ಪೇಸ್ಟ್, ಬಿಳಿ ಜಿನಗ ಉಪ್ಪು, ಪಾಕೇಟ್ ಹಾಲು, ಪೆಟ್ರೋಲ್ ಮಿಶ್ರಿತ ಅಡುಗೆ ಎಣ್ಣ್ಣೆ, ಫಿಲ್ಟರ್ ನೀರು ಮತ್ತು ಸ್ನಾನದ ಪ್ಲಾಸ್ಟಿಕ್ ಬಕೆಟ್, ಇದರ ಬದಲಿಗೆ ಮನೆಯಲ್ಲಿ ತಯಾರಿಸಿದ ಕರಬೂದಿ, ಹರಳುಪ್ಪು, ದೇಶಿ ಹಸುವಿನ ಹಾಲು, ಗಾಣದಿಂದ ತಯಾರಾದ ಎಣ್ಣೆ, ತಾಮ್ರದ ಹಂಡೆಯಲ್ಲಿ ನೀರು ಇವನ್ನೆಲ್ಲ ಬಳಸುವುದರಿಂದ ಯಾರೊಬ್ಬರಿಗೂ ಆಸ್ಪತ್ರೆಗೆ ಹೋಗುವ ಪ್ರಮೇಯವೇ ಬರುವುದಿಲ್ಲ ಎಂದರು.

ರಾಷ್ಟ್ರೀಯ ಮಲ್ಲಕಂಬ ಅಸೋಸಿಯೆಷನ್ ಉಪಾಧ್ಯಕ್ಷ ಎಸ್.ಎಫ್. ಕೊಡ್ಲಿ, ಪ್ರಾಂಶುಪಾಲ ಆರ್.ಎಂ. ಅಂಗಡಿ, ಶಿವಸ್ವಾಮಿ, ವೇದ ಪರಿಣತರಾದ ವೀರೇಶ ಹಿರೇಮಠ, ಕಲಾವಿದ ಈಶ್ವರ ಅರಳಿ, ಮಲ್ಲಪ್ಪ ಮುಳಗುಂದ, ನಾಗರಾಜ ಗೌಡಣ್ಣವರ, ಇತರರು ಇದ್ದರು.

ಶರೀಫ್ ದೊಡಮನಿ, ಅಮೋಘ ಹಿರೇಮಠ, ಮಲ್ಲಯ್ಯ ಹಿರೇಮಠ ಹಾಗೂ ಎಸ್.ಎಸ್. ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net