

ಅರಕಲಗೂಡು: ಮಕ್ಕಳಲ್ಲಿ ಕಲೆ, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಅರಿವು ಮೂಡಿಸಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ ಎಂದು ಚಲನಚಿತ್ರ ನಿರ್ದೇಶಕ ಕೆ.ಎಂ. ರಘು ತಿಳಿಸಿದರು.
ಪಟ್ಟಣದ ಗಣಪತಿ ಕೊತ್ತಲು ಉದ್ಯಾನದಲ್ಲಿ ಮಂಗಳವಾರ ರಾತ್ರಿ ಏಕತಾರಿ ಸಾಂಸ್ಕೃತಿಕ ಸಂಘಟನೆ ವತಿಯಿಂದ ಆಯೋಜಿಸಿದ್ದ ಹಾರೋಣ ಬಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪಠ್ಯ ಚಟುವಟಿಕೆಗಳ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುವುದು ಅಗತ್ಯ. ಇದು ಅವರಲ್ಲಿನ ಸುಪ್ತ ಪ್ರತಿಭೆಯನ್ನು ಅರಳಿಸಲು ಸಹಾಯಕವಾಗಲಿದೆ ಎಂದರು.
ಕಾರ್ಯಕ್ರಮದ ಆಯೋಜಕ ರಂಗಕರ್ಮಿ ದೇವಾನಂದ ವರಪ್ರಸಾದ್ ಮಾತನಾಡಿ, ಜನಪದ ಕಲೆ ನಮ್ಮ ಮೂಲ ಬೇರಾಗಿದ್ದು ಇದನ್ನು ಉಳಿಸಿ ಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ. ಮಕ್ಕಳಲ್ಲಿ ಈ ಕುರಿತು ಅರಿವು ಬೆಳೆಸಿದಾಗ ಅದು ನಿರಂತರವಾಗಿ ಮುಂದುವರೆಯಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಳೆದ 6 ವರ್ಷಗಳಿಂದ ಬೇಸಿಗೆ ಶಿಬಿರದ ಮೂಲಕ ಮಕ್ಕಳಿಗೆ ಪೂಜಾ ಕುಣಿತ, ಪಠಕುಣಿತ, ಮಲ್ಲಕಂಬ, ಕಂಸಾಳೆ, ಕೋಲಾಟ, ತೊಗಲುಬೊಂಬೆಯಂತಹ ಜಾನಪದ ಕಲಾ ಪ್ರಕಾರಗಳನ್ನು ಕಲಿಸುವುದರ ಜತೆಗೆ ಪರಿಸರ ರಕ್ಷಣೆಯ ಕುರಿತು ಅರಿವು ಮೂಡಿಸುತ್ತಿರುವುದಾಗಿ ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ, ಶಾಂತಿನಿಕೇತನ ಪ್ರೌಢಶಾಲೆಯ ಕಾರ್ಯದರ್ಶಿ ಹನುಮೇಗೌಡ ಮಾತನಾಡಿದರು. ಮಕ್ಕಳಿಂದ ವಿವಿಧ ನೃತ್ಯ, ನಾಟಕ ಜಾನಪದ ಕಲಾಪ್ರದರ್ಶನಗಳು ನಡೆದವು.