

ಬೆಂಗಳೂರು: ಇಂಜಿನಿಯರಿಂಗ್ ಕಾಲೇಜುಗಳು ಸರ್ಕಾರ ನಿಗದಿ ಪಡಿಸಿರುವ ಶುಲ್ಕಕ್ಕಿಂತ ಹೆಚ್ಚುವರಿ ವಸೂಲಿ ಮಾಡವಂತಿಲ್ಲವೆಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಕಾಲೇಜುಗಳಿಗೆ ಸೂಚನೆ ನೀಡಲು ನಿರ್ಧರಿಸಿದೆ.
ವಿಜಯವಾಣಿ ಸೋಮವಾರ "ಹೆಚ್ಚುವರಿ ಶುಲ್ಕ ಲೂಟಿ' ಎಂಬ ಶೀರ್ಷಿಕೆ ಅಡಿ ಪ್ರಕಟಿಸಿದ ವಿಶೇಷ ವರದಿಯಿಂದ ಎಚ್ಚೆತ್ತಿರುವ ವಿಟಿಯು ವರದಿಯ ಪ್ರತಿಯನ್ನು ಸೇರಿಸಿ ಯಾವುದೇ ಕಾರಣಕ್ಕೂ ಹೆಚ್ಚುವರಿ ಶುಲ್ಕ ತೆಗೆದುಕೊಳ್ಳುವಂತಿಲ್ಲ. ಒಂದು ವೇಳೆ ತೆಗೆದುಕೊಂಡಲ್ಲಿ ಕಾಲೇಜಿನ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸುತ್ತೋಲೆ ರೂಪಿಸಿ ಕಾಲೇಜುಗಳಿಗೆ ಕಳುಹಿಸಲು ನಿರ್ಧರಿಸಿದೆ.
ವಿಟಿಯು ವ್ಯಾಪ್ತಿಯಲ್ಲಿ 252 ಇಂಜಿನಿಯರಿಂಗ್ ಕಾಲೇಜುಗಳಿವೆ. ಹೆಚ್ಚುವರಿ ಶುಲ್ಕದ ಬಗ್ಗೆ 2017ರಲ್ಲೇ ಕಾಲೇಜುಗಳಿಗೆ ಸೂಚನೆ ನೀಡಿದ್ದರೂ ಸಹ ಕೆಲವು ಕಾಲೇಜುಗಳು ಶುಲ್ಕ ವಸೂಲಿ ಮಾಡುತ್ತಿರುವುದು ವಿಟಿಯು ಗಮನಕ್ಕೆ ಬಂದಿರುವುದರಿಂದ ಮತ್ತೆ ಇದೀಗ ಹೊಸದಾಗಿ ಸುತ್ತೋಲೆ ಹೊರಡಿಸಿ ಎಚ್ಚರಿಕೆ ನೀಡಲು ತೀರ್ಮಾನಿಸಿದೆ.
ಪ್ರತಿ ವರ್ಷ ಸಿಇಟಿಗೆ ನೀಡು ಸೀಟುಗಳಲ್ಲಿ ಸರಾಸರಿ 20 ಸಾವಿರ ಇಂಜಿನಿಯರಿಂಗ್ ಕೋರ್ಸ್ಗಳ ಸೀಟುಗಳು ಭರ್ತಿಯಾಗದೇ ಉಳಿಕೆಯಾಗುತ್ತಿವೆ. ಪರಿಸ್ಥಿತಿ ಈ ರೀತಿ ಇರುವಾಗ ಕಾಲೇಜುಗಳು ವಿದ್ಯಾರ್ಥಿಗಳಿಗೆ ಸಿಇಟಿ ಶುಲ್ಕದಲ್ಲೇ ಪ್ರವೇಶ ಕಲ್ಪಿಸುವ ಬದಲು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದಕ್ಕೆ ವಿಟಿಯು ಬೇಸರ ವ್ಯಕ್ತಪಡಿಸಿದೆ.
ಹೆಚ್ಚುವರಿ ಶುಲ್ಕ ವಸೂಲಿ ಬಗ್ಗೆ ವಿಜಯವಾಣಿ ವರದಿಯಲ್ಲಿ ಸುವಿಸ್ಥಾರವಾಗಿ ವರದಿ ಮಾಡಿದೆ. ಹೆಚ್ಚುವರಿ ಶುಲ್ಕ ಪಡೆಯದಂತೆ ಸುತ್ತೋಲೆ ರೂಪಿಸಿ ಪತ್ರಿಕೆಯ ವರದಿಯನ್ನು ಲಗತ್ತಿಸಿ ಕಾಲೇಜುಗಳಿಗೆ ಕಳುಹಿಸಲಾಗುವುದು.
ಡಾ.ಕರಿಸಿದ್ದಪ್ಪ, ಕುಲಪತಿ, ವಿಟಿಯು