ನೆಟ್ಟಣಕ್ಕೆ ಹೆಚ್ಚುವರಿ ಬಸ್

Published on

ಸುಬ್ರಹ್ಮಣ್ಯ: ಕೆಲ ದಿನಗಳ ಹಿಂದೆ ರೈಲು ಮೂಲಕ ನೆಟ್ಟಣಕ್ಕೆ ಆಗಮಿಸಿ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ತೆರಳಲು ಬಸ್ ಇಲ್ಲದೆ ಪ್ರಯಾಣಿಕರು ಕಾದು ಸುಸ್ತಾದ ಘಟನೆಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ರೈಲು ನಿಲ್ದಾಣಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಕೆಎಸ್‌ಆರ್‌ಟಿಸಿ ನೀಡಿದೆ.

ಪ್ರಯಾಣಿಕರು ಅನುಭವಿಸಿದ ಸಮಸ್ಯೆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು. ಮಾಧ್ಯಮಗಳಲ್ಲಿ ಬಂದಿದ್ದ ವರದಿ ಜೊತೆಗೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಿಸಿದವರನ್ನು ಉಲ್ಲೇಖಿಸಿ ಕುಕ್ಕೆ ಸುಬ್ರಹ್ಮಣ್ಯ ರೈಲು ಬಳಕೆದಾರರು ಟ್ವಿಟರ್ ಮೂಲಕ ಪೋಸ್ಟ್ ಮಾಡಿದ್ದರು. ಇದನ್ನು ಪುತ್ತೂರು-ಸುಬ್ರಹ್ಮಣ್ಯ ರೈಲು ಬಳಕೆದಾರರು ಕೆಎಸ್‌ಆರ್‌ಟಿಸಿಯನ್ನು ಉಲ್ಲೇಖಿಸಿ ಮರು ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್‌ಆರ್‌ಟಿಸಿ, ನಿಮ್ಮ ದೂರನ್ನು ಪರಿಶೀಲಿಸಲಾಯಿತು. ನಿಮಗೆ ತೊಂದರೆ ಆಗಿದ್ದಕ್ಕೆ ವಿಷಾದಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ತರಹದ ನ್ಯೂನ್ಯತೆಗಳು ಕಂಡುಬರದಂತೆ ಸಂಬಂಧಪಟ್ಟ ಘಟಕ ವ್ಯವಸ್ಥಾಪಕರಿಗೆ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡುವಂತೆ ಸೂಚಿಸಲಾಗಿದೆ. ಹಾಗೂ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಉತ್ತರಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ ಅಧಿಕಾರಿಗಳು, ಕುಕ್ಕೆ ಸುಬ್ರಹ್ಮಣ್ಯದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಮೂಲಕ ಆಗಮಿಸುವ ಪ್ರಯಾಣಿಕರಿಗೆ ಬೇಡಿಕೆಯಂತೆ ಈ ಮೊದಲಿನಿಂದಲೂ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಮಾಹಿತಿ ಬಂದ ತಕ್ಷಣ ನಾವು ಸುಬ್ರಹ್ಮಣ್ಯದಿಂದ ಬಸ್ ಕಲ್ಪಿಸುತ್ತೇವೆ. ಇನ್ನೂ ಬೇಡಿಕೆಗಳಿದ್ದಲ್ಲಿ ಕ್ರಮ ಕೈಗೊಳ್ಳಲು ಸುಬ್ರಹ್ಮಣ್ಯ ಬಸ್ ನಿಲ್ದಾಣದ ಅಧಿಕಾರಿಗಳಿಗೆ ಸೂಚಿಸುತ್ತೇವೆ ಎಂದರು.

ಬೇಡಿಕೆಯಂತೆ ಬಸ್ ವ್ಯವಸ್ಥೆ

ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಮೂಲಕ ಆಗಮಿಸುವವರ ಪ್ರಯಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ 6-7 ಕೆಎಸ್‌ಆರ್‌ಟಿಸಿ ಬಸ್ ಟ್ರಿಪ್ ಮಾಡುತ್ತಿದೆ. ಬೆಳಗ್ಗೆ 11.25, 11.45, 12.20, 12.45, 1.30, 2 ಗಂಟೆ ಹೀಗೆ ರೈಲು ನಿಲ್ದಾಣದ ಮೂಲಕ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಇಚ್ಲಂಪಾಡಿ ಮೂಲಕ ತೆರಳುವ ಬಸ್‌ಗಳು ರೈಲು ನಿಲ್ದಾಣದ ಮೂಲಕವೇ ಸಂಚರಿಸುತ್ತಿವೆ. ಆದರೆ ರೈಲು ನಿಲ್ದಾಣಕ್ಕೆ ಆಗಮಿಸುವ ಸಂದರ್ಭದಲ್ಲಿ ಪೂರಕ ಬಸ್ ವ್ಯವಸ್ಥೆ ಕೆಲವೊಮ್ಮೆ ಇರುವುದಿಲ್ಲ ಎನ್ನುವುದು ಪ್ರಯಾಣಿಕರ ಆರೋಪವಾಗಿತ್ತು. ರಾತ್ರಿ ಹಾಗೂ ಮುಂಜಾನೆ ಸಮಯದಲ್ಲಿ ಆಗಮಿಸುವ ರೈಲುಗಳ ಪ್ರಯಾಣಿಕರ ಸಂಚಾರಕ್ಕೂ ಪೂರಕ ಬಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಬೇಡಿಕೆ ವ್ಯಕ್ತವಾಗಿದೆ.

ವ್ಯವಸ್ಥಿತ ತಂಗುದಾಣ ಆಗಲಿ

ನೆಟ್ಟಣದಲ್ಲಿ ದಿನ ನಿತ್ಯ ನೂರಾರು ಪ್ರಯಾಣಿಕರು ಬಸ್ ಮೂಲಕ ಪ್ರಯಾಣಿಸುತ್ತಾರೆ. ರೈಲು ಆಗಮಿಸುವ ವೇಳೆ ಒಮ್ಮೆಲೆ ನೂರಾರು ಪ್ರಯಾಣಿಕರು ಇಲ್ಲಿ ಆಗಮಿಸುತ್ತಾರೆ. ಆದರೆ ನೆಟ್ಟಣ ಪೇಟೆಯಲ್ಲಿ ಸಮರ್ಪಕ ಬಸ್ ತಂಗುದಾಣ ವ್ಯವಸ್ಥೆ ಇಲ್ಲದೆ ರಸ್ತೆ ಬದಿ ನಿಂತುಕೊಂಡೇ ಬಸ್‌ಗೆ ಕಾಯಬೇಕಾಗಿದೆ. ಒಂದು ಬದಿಯಲ್ಲಿ ಬಸ್ ತಂಗುದಾಣ ಇದ್ದರೂ ಅದು ಇಕ್ಕಟ್ಟಾಗಿದೆ. ಇಲ್ಲಿನ ಪ್ರಯಾಣಿಕರ ಸಾಂದ್ರತೆಗೆ ತಕ್ಕಂತೆ ಎರಡೂ ಕಡೆಯಲ್ಲೂ ಬಸ್ ವ್ಯವಸ್ಥಿತ ಬಸ್ ತಂಗುದಾಣ ನಿರ್ಮಿಸಬೇಕು ಎಂಬುದು ಪ್ರಯಾಣಿಕರ ಬೇಡಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net