ಜಿಎಸ್‌ಟಿ ಸುಧಾರಣೆ ನೆಪದಲ್ಲಿ ಸುಲಿಗೆ : ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ

Published on

ಮೈಸೂರು: ಜಿಎಸ್‌ಟಿ ಸುಧಾರಣೆ ನೆಪದಲ್ಲಿ ಕೇಂದ್ರ ಸರ್ಕಾರ ಜನರಿಂದ ಹೆಚ್ಚು ತೆರಿಗೆ ಸುಲಿಗೆ ಮಾಡಲು ಮುಂದಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ದೂರಿದರು.

ಈ ಹಿಂದೆ ಇದ್ದ ನಾಲ್ಕು ಹಂತದ ಜಿಎಸ್‌ಟಿ ಅನ್ನು ಸುಧಾರಣೆ ಮಾಡುವ ನೆಪದಲ್ಲಿ ಮೂರು ಹಂತಕ್ಕೆ ಇಳಿಸಲಾಗಿದೆ. ಆದರೆ ನಾಲ್ಕು ಹಂತದಲ್ಲಿದ್ದ ತೆರಿಗೆಗಿಂತ ಮೂರು ಹಂತದ ಜಿಎರುಸ್‌ಟಿಯಲ್ಲಿ ಹೆಚ್ಚು ಹಣ ಸುಲಿಗೆ ಮಾಡಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದಾಗ ಒಟ್ಟು 4 ಸ್ಲ್ಯಾಬ್‌ಗಳಲ್ಲಿ ಅಂದರೆ ಶೇ.5, ಶೇ.12, ಶೇ.18 ಹಾಗೂ ಶೇ.28ರಷ್ಟು ಜಿಎಸ್‌ಟಿ ಹಾಕಲಾಗುತ್ತಿತ್ತು. ಇವುಗಳನ್ನು ಕೂಡಿ 4ರಿಂದ ಗುಣಿಸಿದರೆ ಶೇ.15.75ರಷ್ಟು ತೆರಿಗೆ ಅಗುತ್ತಿತ್ತು. ಇದರಿಂದ ದೇಶದ ಎಲ್ಲ ವಸ್ತುಗಳ ಮೇಲೆ ಶೇ.15.75ರಷ್ಟು ತೆರಿಗೆ ಬೀಳುತ್ತಿತ್ತು ಎಂದರು.

ಆದರೆ ಈಗ ಇದನ್ನು ಬದಲಾಯಿಸಿ 3 ಸ್ಲ್ಯಾಬ್‌ಗಳಿಗೆ ಇಳಿಸಿದ್ದಾರೆ. ಅಂದರೆ ಶೇ.5, ಶೇ.18 ಹಾಗೂ ಶೇ.40 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಈ ಮೂರನ್ನು ಕೂಡಿ 3 ರಿಂದ ಗುಣಿಸಿದಾಗ ಶೇ.20.75 ತೆರಿಗೆ ಅಗುತ್ತದೆ ಎಂದು ಎಂ.ಲಕ್ಷ್ಮಣ್ ಹೇಳಿದರು.

ಜಿಎಸ್‌ಟಿಯಿಂದ ಜನ ಸಾಮಾನ್ಯರಿಗೆ ಹಾಗೂ ರಾಜ್ಯ ಸರ್ಕಾರಗಳಿಗೆ ನಷ್ಟವಾಗುತ್ತಿದೆಯೇ ವಿನಾ, ಕೇಂದ್ರ ಸರ್ಕಾರಕ್ಕೆ ನಷ್ಟವಾಗುತ್ತಿಲ್ಲ. ಹಾಗಾಗಿ ಜಿಎಸ್‌ಟಿ ಸುಧಾರಿಸುವ ಮೂಲಕ ಜನ ಸಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದು ಹೇಳಿಕೊಂಡು ಮತರಾಜಕಾರಣ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ದೇಶದಲ್ಲಿ ಒಂದು ವರ್ಷಕ್ಕೆ ಜಿಎಸ್‌ಟಿಯಿಂದ ಸಂಗ್ರಹಿಸುವ ತೆರಿಗೆ 25 ಲಕ್ಷ ಕೋಟಿ ರೂ. ಅಗಿದೆ. ಮನಮೋಹನ್ ಸಿಂಗ್ ಕಾಲದಲ್ಲಿ ತೆರಿಗೆ ಸಂಗ್ರಹವಾಗುತ್ತಿದ್ದದ್ದು 15 ರಿಂದ 16 ಲಕ್ಷ ಕೋಟಿ ರೂ. ಆದರೆ ಬಿಜೆಪಿ ಹೆಚ್ಚುವರಿಯಾಗಿ 9 ಲಕ್ಷ ಕೋಟಿ ರೂ. ಅನ್ನು ಜನರಿಂದ ಸುಲಿಗೆ ಮಾಡುತ್ತಿದೆ ಎಂದು ಎಂ.ಲಕ್ಷ್ಮಣ್ ದೂರಿದರು.

ಅಸ್ತ್ರ ಮಾಡಿಕೊಂಡಿದೆ:

ಜಿಎಸ್‌ಟಿ ವಿರೋಧಿಸಿದ್ದ ಬಿಜೆಪಿ ಅದನ್ನೇ ಅಸ್ತ್ರ ಮಾಡಿಕೊಂಡಿದೆ. ಈಗಿನ ಜಿಎಸ್‌ಟಿ ಸುಧಾರಣೆಯಿಂದ ಜನರಿಗೆ ಯಾವುದೇ ಲಾಭವಾಗುವುದಿಲ್ಲ. ವಾರ್ಷಿಕವಾಗಿ 25 ಲಕ್ಷ ಕೋಟಿ ರೂ. ಸಂಗ್ರಹಿಸುತ್ತಿದ್ದು, ನಿರೀಕ್ಷಿಸಿದಂತೆ 6 ರಿಂದ 7 ಲಕ್ಷ ಕೋಟಿ ರೂ. ಕಡಿಮೆಯಾಗಬೇಕು. ಎಸ್‌ಬಿಐ ಸರ್ವೆ ಮಾಡಿದ ಪ್ರಕಾರ ಕೇಂದ್ರ ಸರ್ಕಾರಕ್ಕೆ ವಾರ್ಷಿಕವಾಗಿ 3,700 ಕೋಟಿ ರೂ. ನಷ್ಟ ಆಗಬೇಕು. ಆದರೆ ಸ್ಪಷ್ಟವಾಗಿ ನಷ್ಟ ಆಗುತ್ತಿರುವುದು ಆಯಾ ರಾಜ್ಯಗಳಿಗೆ ಮಾತ್ರ ಎಂ.ಲಕ್ಷ್ಮಣ್ ಹೇಳಿದರು.

ಬ್ಯಾಲೆಟ್ ಪೇಪರ್ ಸ್ವಾಗತಾರ್ಹ:

ರಾಜ್ಯದಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವ ಪ್ರಸ್ತಾವನೆ ಸ್ವಾಗತಾರ್ಹ. ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಯನ್ನು ನಡೆಸುತ್ತಿರುವುದನ್ನು ಬಿಜೆಪಿ ವಿರೋಧಿಸುತ್ತಿದೆ. ಇವಿ ಎಂ ಬೇಕು ಎಂದು ವಿಜಯೇಂದ್ರ ಕೇಳುತ್ತಿದ್ದಾರೆ. ಆದರೆ ಜಗತ್ತಿನ ಮುಂದುವರಿದ ಅಮೆರಿಕ, ಯುಕೆ, ಆಸ್ಟ್ರೇಲಿಯಾ ಕೆನಡಾ, ಫ್ರಾನ್ಸ್ ,ಜಪಾನ್ ದೇಶಗಳು ಇವಿ ಎಂ ಮೇಲೆ ನಂಬಿಕೆ ಇಟ್ಟಿಲ್ಲ. ಹೀಗಾಗಿ ಅಲ್ಲಿ ಯಂತ್ರಗಳ ಮೂಲಕ ಚುನಾವಣೆ ನಡೆಸುವುದಿಲ್ಲ ಎಂದು

ಎಂ.ಲಕ್ಷ್ಮಣ್ ಹೇಳಿದರು.

ವಿರೋಧ ಬೇಡ:

ನಿಸಾರ್ ಅಹಮ್ಮದ್ ಅವರು ದಸರಾ ಉದ್ಘಾಟಿಸಿದ್ದಾಗ ಹಿಂದೆಯೇ ನಿಂತಿದ್ದ ಮಾಜಿ ಸಂಸದ ಪ್ರತಾಪಸಿಂಹ ಅವರು, ಈಗ ಬಾನುಮುಷ್ತಾಕ್ ಅವರು ಉದ್ಘಾಟನೆ ಮಾಡಲು ಏಕೆ ವಿರೋಧಿಸುತ್ತಾರೆ ಎನ್ನುವುದು ತಿಳಿಯುವುದಿಲ್ಲ ಎಂದರು.

ಮೈಸೂರು ಗ್ರಾಮಾಂತರ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ಹಿರಿಯ ಕಾಂಗ್ರೆಸ್ ಮುಖಂಡ ಬಿ.ಎಂ.ರಾಮು, ಮಾಧ್ಯಮ ವಕ್ತಾರ ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net