ಪೊಲೀಸ್ ಪೇದೆ ಮಾರ್ಗದರ್ಶನದಲ್ಲಿ ಸುಲಿಗೆ, ೯ ಆರೋಪಿಗಳ ಬಂಧನ

IMG_20250306_222653.jpg
Published on

ಚಿಕ್ಕಬಳ್ಳಾಪುರ: ಪೊಲೀಸ್ ಪೇದೆಯ ಮಾರ್ಗದರ್ಶನದಲ್ಲಿ ತರಬೇತಿ ಪಡೆದು, ಮನೆಯಲ್ಲಿ ಹಣ ಒಡವೆಗಳನ್ನು ಸುಲಿಗೆ ಮಾಡಿದ್ದ ೯ ಆರೋಪಿಗಳನ್ನು ಗೌರಿಬಿದನೂರು ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಣ್ಣೂರು ಪೊಲೀಸ್ ಠಾಣೆಯ ಪೇದೆ ಎಂ.ಟಿ.ಇಲಿಯಾಜ್ (೩೭), ಬೆಂಗಳೂರಿನ  ಎಚ್.ಸಿದ್ದಯ್ಯ ರಸ್ತೆಯ ಚಾಂದಾಪಾಷಾ(೩೫), ಚಾಮುಂಡಿ ನಗರದ ಫೈರೋಜ್ ಖಾನ್ (೩೫), ಭೂಪಸಂದ್ರದ ಬಷೀರ್ ಅಹಮದ್ (೪೯),  ಡಿಜೆ ಹಳ್ಳಿಯ ತನ್ವೀರ್ (೩೨), ಹೆಬ್ಬಾಳದ ಇರ್ಫಾನ್ ಪಾಷಾ (೩೨), ಡಿಜೆ ಹಳ್ಳಿಯ ಅಮೀರ್ ಖಾನ್ (೨೧), ದೊಡ್ಡಬಳ್ಳಾಪುರದ ಗಾಣಿಗರಪೇಟೆಯ ಸಾಬೀರ್ (೪೨), ಗೌರಿಬಿದನೂರಿನ ಕರೇಕಲ್ಲಹಳ್ಳಿಯ ಬಾಬಾ ಜಾನ್ (೩೮) ಆರೋಪಿಗಳು. ಬಂಧಿತರಿAದ ಹಣ, ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.


*ಅಕ್ರಮ ಆಸ್ತಿ ಮಾಹಿತಿ  
ಗೌರಿಬಿದನೂರಿನ ಬಸವೇಶ್ವರ ನಗರದ ಶ್ರೀನಿವಾಸ್ ಎಂಬುವರು ಅಕ್ರಮವಾಗಿ ೨ ಕೋಟಿ ರೂಗಳಿಗೂ ಹೆಚ್ಚು ಹಣ, ಒಡವೆಗಳನ್ನು ಸಂಪಾದಿಸಿದ್ದಾನೆ ಎಂಬುದಾಗಿ ಭಾವಿಸಿ ಸುಲಿಗೆಕೋರರು ಕಳ್ಳತನಕ್ಕೆ ಸಂಚು ರೂಪಿಸಿದ್ದಾರೆ. ಕಳೆದ ಫೆ.೨೦ ರಂದು ರಾತ್ರಿ ೮.೩೦ ರ ವೇಳೆ ಮನೆಯ ಮಾಲೀಕ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋಗಿರುವುದನ್ನರಿತುಕೊಂಡು ತಂಡವು ದಾಳಿ ನಡೆಸಿದೆ. ಮನೆಯಲ್ಲಿದ್ದವರನ್ನು ಬೆದರಿಸಿ ಕಪಾಟಿನಲ್ಲಿದ್ದ ಒಡವೆ, ದಾಖಲೆಗಳನ್ನು ತೆಗೆದುಕೊಂಡು ಪರಾರಿಯಾಗಿದೆ. ಇದರ ಬಗ್ಗೆ ಗೌರಿಬಿದನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಆರೋಪಿಗಳು ಮೊದಲ ಬಾರಿಗೆ ಸುಲಿಗೆಗೆ ಯತ್ನಿಸಿ ವಿಲವಾಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.


*ಆರೋಪಿಗಳು ಜಾಡು
ಪ್ರಕರಣವನ್ನು ಭೇದಿಸಲು ಡಿವೈಎಸ್ಪಿ ಶಿವಕುಮಾರ್, ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣಮ ಸಬ್ ಇನ್ಸ್ ಪೆಕ್ಟರ್‌ಗಳಾದ ಗೋಪಾಲ, ಚಂದ್ರಕಲಾ, ಎನ್.ರಮೇಶ್ ಗುಗ್ಗುರಿ, ಮೂರ್ತಿ, ಸಿಬ್ಬಂದಿ ಶ್ರೀರಾಮಯ್ಯ, ರಿಜ್ವಾನ್, ಶ್ರೀನಿವಾಸರೆಡ್ಡಿ, ಅಶ್ವತ್ಥಪ್ಪ, ಶಿವಶೇಖರ್, ಮಹಾಂತೇಶ, ನವೀನ್ ಕುಮಾರ್, ಚಂದ್ರಪ್ಪ ಯಲಿಗಾರ್, ಹನುಮಂತರಾಯ, ರವಿಕುಮಾರ್, ಮುನಿಕೃಷ್ಣರನ್ನೊಳಗೊಂಡ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ರಚಿಸಿದ್ದರು. ಅಪರಾಧ ನಡೆದ ಸ್ಥಳ ಹಾಗೂ ಗೌರಿಬಿದನೂರು ನಗರ ವಿವಿಧ ಭಾಗಗಳಲ್ಲಿ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾದ ವಿಡಿಯೋ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರು, ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುತಿಸಿದ್ದರು. ಅದರಂತೆ ಆರೋಪಿ ಅಮೀನ್‌ನನ್ನು ಹಿಡಿದು, ವಿಚಾರಣೆ ನಡೆಸಿದಾಗ ದುಷತ್ಯದ ಸಂಚು ಬಯಲಾಗಿದೆ. ಇದರ ಮಾಹಿತಿಯನ್ನಾಧಾರಿಸಿ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ.


*ತರಬೇತಿ ನೀಡಿದ ಪೇದೆ
ಸುಲಿಗೆಯ ಈ ತಂಡಕ್ಕೆ ಹೆಣ್ಣೂರು ಟ್ರಾಫಿಕ್ ಪೊಲೀಸ್ ಠಾಣೆಯ ಇಲಿಯಾಜ್ ಮನೆಯಲ್ಲಿ ತರಬೇತಿ ನೀಡುತ್ತಿದ್ದ. ಕಳ್ಳತನದ ಯೋಜನೆಗಳನ್ನು ರೂಪಿಸಿ, ಕಳುಹಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಿ, ಇಲಾಖೆಯ ಗೌರವವನ್ನು ಹೆಚ್ಚಿಸಬೇಕಾಗಿದ್ದ ಪೇದೆಯೇ ರೌಡಿಶೀಟರ್ ಹಾಗೂ ಕಳ್ಳರೊಂದಿಗೆ ಸೇರಿಕೊಂಡು ದುಷತ್ಯಗಳನ್ನು ನಡೆಸಲು ತರಬೇತಿ ನೀಡುತ್ತಿದ್ದ ಎಂಬ ವಿಚಾರವು ಪೊಲೀಸ್ ವಲಯವನ್ನು ಬೆಚ್ಚಿ ಬೀಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net