

ಹೊಳೆನರಸೀಪುರ: ಖಾಸಗಿ ನರ್ಸಿಂಗ್ ಹೋಮ್ ಹಾಗೂ ಖಾಸಗಿ ಶಾಲೆಗಳು ಸಾರ್ವಜನಿಕರ ಜೀವನದ ಜತೆ ಚೆಲ್ಲಾಟವಾಡುತ್ತಿವೆ ಎಂದು ಶಾಸಕ ಎಚ್.ಡಿ.ರೇವಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಬಿಆರ್‌ಸಿ ಕೇಂದ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಮತ್ತು ಅಲಿಂಕೋ ಬೆಂಗಳೂರು ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ಬುಧವಾರ ಆಯೋಜಿಸಿದ್ದ ಅಂಗವಿಕಲ ಮಕ್ಕಳಿಗೆ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಖಾಸಗಿ ಶಾಲೆಗಳು ಲಕ್ಷಾಂತರ ರೂಪಾಯಿಗಳ ಡೊನೇಷನ್ ಪಡೆದು ಸಾರ್ವಜನಿಕರನ್ನು ವಂಚಿಸುತ್ತಿವೆ. ಅದೇ ರೀತಿ ಖಾಸಗಿ ನರ್ಸಿಂಗ್ ಹೋಮ್‌ಗಳು ಸಮಸ್ಯೆಗಳ ನೆಪದಲ್ಲಿ ಲಕ್ಷ, ಲಕ್ಷಗಟ್ಟಲೇ ಬಡಜನರಿಂದ ವಸೂಲಿ ದಂಧೆಗಿಳಿದಿವೆ. ಇದರಿಂದ ಸಾರ್ವಜನಿಕರು ಸಮಸ್ಯೆ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರ ಹಾಗೂ ಇಲಾಖೆ ಅಧಿಕಾರಿಗಳು ಖಾಸಗಿಯವರ ನಡುವೆ ಶಾಮೀಲಾಗಿ ಈ ಅವ್ಯವಸ್ಥೆಗೆ ಕಾರಣವಾಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಶಿಕ್ಷಣ ಹಾಗೂ ಆರೋಗ್ಯ ಜನರಿಗೆ ಅತ್ಯವಶ್ಯಕ. ಈ ಕ್ಷೇತ್ರಗಳಲ್ಲಿ ಅತಿ ಮುಖ್ಯವಾದ ಮೂಲಸೌಕರ್ಯಗಳನ್ನು ಒದಗಿಸಿದರೆ ಬಡಜನರಿಗೆ ಸಹಕಾರಿಯಾಗಲಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳೇ ಸರ್ಕಾರಿ ಶಾಲೆಗಳಿಗೆ ವಿದ್ಯಾಭ್ಯಾಸ ಮಾಡಲು ಸೇರುತ್ತಾರೆ. ಇಂಥ ಮಕ್ಕಳ ಭವಿಷ್ಯದಲ್ಲಿ ಸರ್ಕಾರ ಚೆಲ್ಲಾಟ ಆಡಬಾರದು. ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯಗಳನ್ನು ತುರ್ತಾಗಿ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಮಿತಿಮೀರಿದೆ. ಪ್ರತಿಭಾವಂತ ಶಿಕ್ಷಕರಿಲ್ಲದೆ ಬಡ ವಿದ್ಯಾರ್ಥಿಗಳು ವಿದ್ಯೆ ಕಲಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಈ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಚಿವರ ಜತೆ ವಿಧಾನಸಭೆಯಲ್ಲಿ ಚರ್ಚಿಸುತ್ತೇನೆ ಎಂದು ಗುಡುಗಿದರು.
ಖಾಸಗಿ ಶಾಲೆಗಳಿಗೆ ಸಮನಾಗಿ ಸರ್ಕಾರಿ ಶಾಲೆಗಳು ಪೈಪೋಟಿ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಮೂಲಸೌಲಭ್ಯ ಹಾಗೂ ಶಿಕ್ಷಕರ ನೇಮಕಾತಿ ಮಾಡುವ ಮೂಲಕ ಶಿಕ್ಷಣ ಇಲಾಖೆ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು. ಖಾಸಗಿ ನರ್ಸಿಂಗ್ ಹೋಮ್ ಗಳಲ್ಲಿ ಬಡಜನರು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಲಕ್ಷಗಟ್ಟಲೆ ಹಣವಿದ್ದರೆ ಚಿಕಿತ್ಸೆ, ಇಲ್ಲವಾದರೆ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಸರ್ಕಾರ ಕಡಿವಾಣ ಹಾಕಬೇಕು. ಬಡಜನರ ನೆರವಿಗೆ ಧಾವಿಸಬೇಕು ಎಂದು ಹೇಳಿದರು.
ನಮ್ಮ ಸರ್ಕಾರ ಇದ್ದಾಗ 1600 ಪ್ರೌಢಶಾಲೆ, 600 ಪಿಯು ಕಾಲೇಜು, 250 ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಲಾಗಿದೆ. 2000 ಅಂಗವಿಕಲ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಾಗಿದೆ. ತಾಲೂಕಿನಲ್ಲಿ ಏಳು ಪ್ರಥಮ ದರ್ಜೆ ಕಾಲೇಜು, ಏಳು ಮುರಾರ್ಜಿ ದೇಸಾಯಿ ವಸತಿ ಶಾಲೆಗಳು, 6 ಕೆಪಿಎಸ್ಸಿ ಶಾಲೆಗಳು ಹಾಗೂ ನರ್ಸಿಂಗ್ ಕಾಲೇಜು ಪಾಲಿಟೆಕ್ನಿಕ್ ಕಾಲೇಜು ತೆರೆಯುವ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲಾಗಿದೆ. ಇದೆಲ್ಲ ಸಾಧ್ಯವಾಗಿದ್ದು ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಸಹಕಾರದಿಂದ ಎಂದು ಸ್ಮರಿಸಿದರು.
ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮುಂದುವರಿಸಬೇಕು. ಪಾಲಕರು ಕೃಷಿ ಚಟುವಟಿಕೆ ಹಾಗೂ ಕೂಲಿ ಕಾಯಕಗಳನ್ನು ಮಾಡುತ್ತ ಮಕ್ಕಳು ವಿದ್ಯಾಭ್ಯಾಸ ಮಾಡಬೇಕೆಂಬ ಒತ್ತಾಸೆಯಿಂದ ಶ್ರಮವಹಿಸುತ್ತಾರೆ. ಅವರ ಆಸೆಗೆ ತಣ್ಣೀರೆರಚದೆ ಉತ್ತಮ ಫಲಿತಾಂಶ ನೀಡುವ ಮೂಲಕ ಶಾಲೆಗೆ ಹಾಗೂ ಪಾಲಕರಿಗೆ ಗೌರವ ತಂದು ಕೊಡಬೇಕೆಂದು ಸಲಹೆ ನೀಡಿದರು.
ತಾಲೂಕಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಟಾಪ್ 3 ವಿದ್ಯಾರ್ಥಿಗಳಾದ ಹಳ್ಳಿ ಮೈಸೂರು ಪ್ರೌಢಶಾಲೆಯ ಪಿ.ನಿರಂಜನ್-597, ಬನುಕುಪ್ಪೆ ಶಾಲೆಯ ಪಿ.ಆರ್.ಲಕ್ಷ್ಮೀಕಾಂತ್ 587, ಮೂಡಲಹಿಪ್ಪೆ ಶಾಲೆಯ ಎಂ.ಎಸ್.ಪ್ರೀತಮ್ 579 ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅಂಗವಿಕಲ ಮಕ್ಕಳಿಗೆ ಸಲಕರಣೆಗಳನ್ನು ವಿತರಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ಪುರಸಭೆ ಅಧ್ಯಕ್ಷ ಪ್ರಸನ್ನ ಕುಮಾರ್, ವೈಷ್ಣವಿ ಟ್ರಸ್ಟ್ ಅಧ್ಯಕ್ಷೆ ಕಾಮಾಕ್ಷಿ, ಪರಮೇಶ್ವರ್, ಕಾಳೇಗೌಡ, ಪದ್ಮಜಾ, ನಾಗರಾಜು, ನಿಂಗರಾಜು, ಪುಟ್ಟಣ್ಣಯ್ಯ ಶಿಕ್ಷಕ ಚಂದ್ರಶೇಖರ್, ಪಿ.ರಾಜು ಇತರರು ಇದ್ದರು.