

ಬಸವಕಲ್ಯಾಣ: ನಗರದಲ್ಲಿ ಗುರುವಾರ ರಾತ್ರಿ ಚಿನ್ನದ ವ್ಯಾಪಾರಿ, ಕರೀಮ್ ಕಾಲನಿ ನಿವಾಸಿ ನಜಿಮೋದ್ದಿನ್ ರಬ್ಬಾನಿ ನಾಯಕ್ವಾಡೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ನಗದು ಮತ್ತು ಚಿನ್ನಾಭರಣ ದೋಚಲಾಗಿದೆ.
ಗಾಂಧಿ ವೃತ್ತ ಸಮೀಪದ ಖುರೇಶಿ ಕಾಂಪ್ಲೆಕ್ಸ್ನ ಅಂಗಡಿಯಿಂದ ರಾತ್ರಿ ೯ರ ಸುಮಾರಿಗೆ ಸ್ಥಳೀಯರೊಬ್ಬರ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಸಿಡಿಪಿಒ ಕಚೇರಿ ಎದುರಿನ ಮುಖ್ಯ ರಸ್ತೆಯಲ್ಲಿ ಕಾರಿನಲ್ಲಿ ಹಿಂಬಾಲಿಸಿದ ಇಬ್ಬರು ನಜಿಮೋದ್ದಿನ್ ರಬ್ಬಾನಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಲ್ಲದೆ ಕೈಯಲ್ಲಿದ್ದ ೩.೫ ತೊಲ ಚಿನ್ನ, ೧೮೦ ಗ್ರಾಂ ಬೆಳ್ಳಿ ಆಭರಣ ಹಾಗೂ ೧.೮೦ ಲಕ್ಷ ರೂ. ನಗದು ಹೊಂದಿದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಗಂಭೀರ ಗಾಯಗೊಂಡ ವ್ಯಾಪಾರಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿವೈಎಸ್‌ಪಿ ಜೆ.ಎಸ್. ನ್ಯಾಮಗೌಡರ, ಸಿಪಿಐ ಅಲಿಸಾಬ್, ಪಿಎಸ್‌ಐ ಅಂಬರೀಶ್ ವಾಗ್ಮೋಡೆ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶುಕ್ರವಾರ ಎಸ್‌ಪಿ ಪ್ರದೀಪ್ ಗುಂಟಿ, ಹೆಚ್ಚುವರಿ ಎಸ್‌ಪಿ ಚಂದ್ರಕಾಂತ ಪೂಜಾರಿ ಸೇರಿ ಹಿರಿಯ ಅಧಿಕಾರಿಗಳು ಹಾಗೂ ತಜ್ಞರು ಸ್ಥಳ ಪರಿಶೀಲನೆ ನಡೆಸಿ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದೆ.