

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ದಸ್ತಾವೇಜು ನೋಂದಣಿ ಸೇರಿದಂತೆ ಇತರ ದಾಖಲೆ ಪತ್ರಗಳನ್ನು ನೀಡಲು ಹಣ ಸುಲಿಗೆ ಮಾಡಿದ ಅಧಿಕಾರಿಗಳ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘ ಒತ್ತಾಯಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರಗೆ ಸಂಘದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದ್ದಾರೆ. ಇಲ್ಲಿನ ಕಚೇರಿಯಲ್ಲಿ ಅನಧಿಕೃತವಾಗಿ ಇಬ್ಬರು ವ್ಯಕ್ತಿಗಳನ್ನು ನೇಮಿಸಿಕೊಂಡು ಹಣವನ್ನು ಅಕ್ರಮವಾಗಿ ವಸೂಲಿ ಮಾಡಲಾಗುತ್ತಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕ್ರಯ ಪತ್ರದ ನಕಲು, ಇಸಿ ಸೇರಿದಂತೆ ಇತರ ದಾಖಲೆಗಳನ್ನು ನೀಡಲು, ಮೊಹರು ಹಾಕಲು ಹಣಕ್ಕಾಗಿ ಒತ್ತಾಯಿಸಲಾಗುತ್ತಿದೆ. ಇದರ ಅವ್ಯವಹಾರಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದೆ.
ಈ ಸಂದರ್ಭದಲ್ಲಿ ರೈತ ಸಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತಿಶ್, ಕಾರ್ಯಾಧ್ಯಕ್ಷ ಎಚ್.ಎನ್.ಕದಿರೇಗೌಡ, ತಾಲೂಕು ಅಧ್ಯಕ್ಷ ಎ.ಎನ್.ಮುನೇಗೌಡ, ಕಾರ್ಯದರ್ಶಿ ನವೀನಾಚಾರ್ಯ, ಪ್ರಧಾನ ಕಾರ್ಯದರ್ಶಿ ಅರಿಕೆರೆ ಸಂತೋಷ್, ಉಪಾಧ್ಯಕ್ಷ ಡಿ.ವಿ.ನಾರಾಯಣಸ್ವಾಮಿ, ಪದಾಧಿಕಾರಿಗಳಾದ ವಸಂತ್, ಮುನಿರಾಜ್, ಚಿಕ್ಕಪ್ಪಯ್ಯ ಮತ್ತಿತರರು ಇದ್ದರು.