

ತುಮಕೂರು: ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ರಾಗಿ ಕೊಯ್ಲಿಗೆ ಬಂದಿದ್ದು, ಕೊಯ್ಲು ಯಂತ್ರದ ನೆಪದಲ್ಲಿ ರೈತರ ಸುಲಿಗೆ ನಡೆಯುತ್ತಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ.
ಮುಂಗಾರು ಹಂಗಾಮಿನಲ್ಲಿ 153918 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯಾಗಿದ್ದು, ತಮಿಳುನಾಡಿನಿಂದ ಆಗಮಿಸಿರುವ ಯಂತ್ರಗಳು ರೈತರ ಹೊಲಕ್ಕೆ ಲಗ್ಗೆ ಇಟ್ಟಿವೆ.
ಜಿಲ್ಲೆಯಲ್ಲಿ ಭರ್ಜರಿ ರಾಗಿ ಬೆಳೆ ಕಟಾವು ನಡೆಸಲು ಮಾನವ ಸಂಪನ್ಮೂಲದ ಕೊರತೆಯಿಂದ ರೈತರು ಅನಿವಾರ್ಯವಾಗಿ ಯಂತ್ರಗಳ ಮೊರೆ ಹೋಗಿದ್ದಾರೆ. ತಮಿಳುನಾಡಿನಲ್ಲಿ ಭತ್ತ ಕೊಯ್ಯುವ ಯಂತ್ರಗಳೇ ರಾಗಿ ಹೊಲಕ್ಕೂ ಬಂದಿದ್ದು ಮನಸ್ಸಿಗೆ ಬಂದಂತೆ ದರ ನಿಗದಿಗೊಳಿಸಿ ರೈತರನ್ನು ಶೋಷಿಸಲಾಗುತ್ತಿದೆ.
ಹವಾಮಾನ ವೈಪರೀತ್ಯ, ಕೂಲಿ ಆಳುಗಳ ಅಭಾವದಿಂದ ಎಲ್ಲರೂ ಕಟಾವು ಮಾಡಲು ನೂತನ ಯಂತ್ರಗಳನ್ನು ಅವಲಂಭಿಸು ವಂತಾಗಿದ್ದು ಇದನ್ನೇ ಬಂಡವಾಳ ಮಾಡಿಕೊಂಡ ಕಟಾವು ಯಂತ್ರದ ಮಾಲೀಕರು ದುಭಾರಿ ದರ ನಿಗದಿಮಾಡಿ ರೈತರಿಂದ ಹಣ ಪೀಕುತ್ತಿದ್ದಾರೆ. ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ, ಶಿರಾ ತಾಲೂಕುಗಳ ಬಹು ತೇಕ ಹಳ್ಳಿಗಳ ರೈತರು ಏಕಕಾಲದಲ್ಲೇ ಕೊಯ್ಲಿಗೆ ಸಿದ್ಧವಾಗಿದ್ದು ಕೂಲಿಕಾರರ ಬೇಡಿಕೆ ಹೆಚ್ಚಾಗಿದೆ. ದುಬಾರಿ ಕೂಲಿಗೆ ಹೆದರಿ ಯಂತ್ರದ ಮೊರೆ ಹೋದರೂ ರೈತರಿಗೆ ಅನುಕೂಲವಾಗುತ್ತಿಲ್ಲ. ಕೂಡಲೇ ಜಿಲ್ಲಾಡಳಿತ ಯಂತ್ರಗಳಿಗೆ ನಿರ್ದಿಷ್ಟ ದರ ನಿಗದಿ ಮಾಡಬೇಕಾದ ಅಗತ್ಯವಿದೆ. ರಾಗಿ ಕೊಯ್ಲು ಕಟಾವಿಗೆ ಒಬ್ಬ ಕೂಲಿಕಾರನಿಗೆ ದಿನಕ್ಕೆ 500 ರೂ. ನೀಡಬೇಕಾಗಿದ್ದು ಒಂದು ಎಕರೆಯಲ್ಲಿ ಕಟಾವು ಮಾಡಲು ಕನಿಷ್ಠ 10 ಜನರು ಅಗತ್ಯವಿದ್ದು 5 ಸಾವಿರ ವೆಚ್ಚ ತಗುಲುತ್ತಿದೆ, ಬೇರೆ ಬೇರೆ ಊರುಗಳಿಂದ ಮುಂಗಡ ಹಣ ಕೊಟ್ಟು ಕರೆಸಿಕೊಳ್ಳುವ ಸ್ಥಿತಿ ಎದುರಾಗಿರು ವುದರಿಂದ ರೈತರು ಆಧುನಿಕ ತಂತ್ರಜ್ಞಾನದತ್ತ ಮೊರೆಹೋಗಿರುವುದೇ ಮಾಲೀಕರಿಗೆ ಬಂಡವಾಳವಾಗಿದೆ.
ರಾಗಿ ಕಟಾವು ಯಂತ್ರಗಳು ಹೆಚ್ಚು ದರ ನಿಗದಿ ಮಾಡಲು ಅವಕಾಶ ನೀಡಬಾರದು ಎಂದು ತಹಸೀಲ್ದಾರ್‌ಗೆ ಸೂಚನೆ ನೀಡಲಾಗಿದ್ದು ರೈತರು, ಯಂತ್ರದ ಮಾಲೀಕರು ಹಾಗೂ ದಲ್ಲಾಳಿಗಳ ಸಮ್ಮುಖದಲ್ಲಿ ದರ ನಿಗದಿ ಮಾಡಲು ಸೂಚಿಸಲಾಗಿದೆ, ಹೆಚ್ಚು ದರ ಪಡೆದರೆ ಕೃಷಿ ಅಥವಾ ಕಂದಾಯ ಇಲಾಖೆ ಅಧಿಕಾರಿಗಳಿಗೆ ರೈತರು ಮಾಹಿತಿ ನೀಡಬೇಕು. ಬಿ.ಸಿ.ನಾಗೇಶ್ ಶಾಸಕ, ತಿಪಟೂರು ರಾಗಿ ಕಟಾವು ಯಂತ್ರಗಳನ್ನು ಸ್ಥಳೀಯ ದಲ್ಲಾಳಿಗಳು ನಿಯಂತ್ರಿಸಲಾರಂಭಿದ್ದಾರೆ, ಮನಸ್ಸಿಗೆ ಬಂದಂತೆ ದರ ನಿಗದಿ ಮಾಡುತ್ತಿದ್ದರೂ ಜಿಲ್ಲಾಡಳಿತ ಜಾಣಮೌನವಹಿಸಿದೆ. ಹೊರರಾಜ್ಯದಿಂದ ಬಂದಿರುವ ಯಂತ್ರಗಳಿಗೆ ಕಡಿವಾಣ ಹಾಕಬೇಕು, ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವಂತೆ ನ್ಯಾಯವಾದ ದರ ಪಡೆಯಲು ಸೂಚಿಸಲು ಕಾರ್ಯಪಡೆ ರಚಿಸಬೇಕು. ರಾಮಲಿಂಗಯ್ಯ ರೈತ, ಕಂದಿಕೆರೆ