ಅಪರಿಚಿತರಿಂದ ಮೂವರ ಸುಲಿಗೆ

extortion
Published on

ಉಡುಪಿ: ಅಪರಿಚಿತ ವ್ಯಕ್ತಿಗಳಿಬ್ಬರು ದ್ವಿಚಕ್ರ ವಾಹನದಲ್ಲಿ ಒಬ್ಬಂಟಿಯಾಗಿ ಹೋಗುತ್ತಿದ್ದವರನ್ನು ಗುರಿ ಮಾಡಿಕೊಂಡು ಸೆ.19ರಂದು ಬೆಳಗಿನ ಜಾವ ಮಣಿಪಾಲ ಮತ್ತು ಉಡುಪಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆ ಸುಲಿಗೆ ಮಾಡಿದ್ದಾರೆ.

ಮಣಿಪಾಲ ಪ್ರೆಸ್ ಉದ್ಯೋಗಿ ಉದ್ಯಾವರ ನಿವಾಸಿ ಯತೀಂದ್ರ, ಮೀನು ವ್ಯಾಪಾರಿ, ಅಲೆವೂರಿನ ನಿವಾಸಿ ನಿತೀಶ್, ಮಣಿಪಾಲ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಧರಣೇಂದ್ರ ಎಂಬುವರಿಂದ ಸುಲಿಗೆ ಕೋರರು ಹಣ ಮತ್ತು ಮೊಬೈಲ್ ದೋಚಿದ್ದಾರೆ. ಇವರಲ್ಲಿ ಧರಣೇಂದ್ರ ಹಾಗೂ ಯತೀಂದ್ರ ಎಂಬುವರಿಗೆ ಸುಲಿಗೆಕೋರರು ಆಯುಧದಲ್ಲಿ ಇರಿದು, ಗಾಯಗೊಳಿಸಿದ್ದಾರೆ.

ಬೈಕ್‌ನಲ್ಲಿ ಇಬ್ಬರು ಬೆಳಗ್ಗೆ 4.30ರ ಸುಮಾರಿಗೆ ಇಂದ್ರಾಳಿ ಪೆಟ್ರೋಲ್ ಬಂಕ್ ಸಮೀಪ ಬೆಂಗಳೂರಿನಿಂದ ರೈಲಿನಲ್ಲಿ ಬಂದು ಮಣಿಪಾಲದಲ್ಲಿರುವ ಮನೆಗೆ ತೆರಳುತ್ತಿದ್ದ ಧರಣೇಂದ್ರ ಅವರನ್ನು ತಡೆದು ನಿಲ್ಲಿಸಿ, ಅವರಲ್ಲಿದ್ದ ಮೊಬೈಲ್ ಮತ್ತು 2 ಸಾವಿರ ರೂ., ನಗದು ದೋಚಿದ್ದಾರೆ. ವಿರೋಧ ವ್ಯಕ್ತಪಡಿಸಿದ ಅವರಿಗೆ ಸುಲಿಗೆ ಕೋರರು, ತಮ್ಮಲ್ಲಿದ್ದ ಆಯುಧದಿಂದ ಚುಚ್ಚಿದ್ದಾರೆ.

ಅಲ್ಲಿಂದ ಕುಕ್ಕಿಕಟ್ಟೆ ಡಯಾನ ಟಾಕೀಸ್ ಬಳಿ ಬೆಳಗಿನ ಜಾವ 5ಗಂಟೆಗೆ ಬೈಕಿನಲ್ಲಿ ಮಲ್ಪೆಗೆ ಮೀನು ಖರೀದಿಸಲು ತೆರಳುತ್ತಿದ್ದ ನಿತೀಶ್ ಅವರನ್ನು ತಡೆದು ನಿಲ್ಲಿಸಿ ಅವರ ಬಳಿ ಮೊಬೈಲ್ ಹಾಗೂ 15ಸಾವಿರ ರೂ. ನಗದು ದೋಚಿದ್ದಾರೆ. ಅಲ್ಲಿಂದ ತೆರಳಿದ ದುಷ್ಕರ್ಮಿಗಳು ಅಲೆವೂರು ಗುಡ್ಡೆಯಂಗಡಿ ಜಂಕ್ಷನ್ ಬಳಿ ಬೆಳಗ್ಗೆ 5.30ರ ಸುಮಾರಿಗೆ ಮಣಿಪಾಲ ಪ್ರೆಸ್‌ನಲ್ಲಿ ರಾತ್ರಿ ಪಾಳಿ ಮುಗಿಸಿ ಉದ್ಯಾವರ ಮನೆಗೆ ತೆರಳುತ್ತಿದ್ದ ಯತೀಂದ್ರ ಅವರನ್ನು ತಡೆದು ನಿಲ್ಲಿಸಿದರು. ಅವರಲ್ಲಿದ್ದ ಮೊಬೈಲ್ ದೋಚಿ ಪರಾರಿಯಾಗಿದ್ದಾರೆ. ಇಂದ್ರಾಳಿ ಮತ್ತು ಅಲೆವೂರು ಗುಡ್ಡೆಯಂಗಡಿಯಲ್ಲಿ ನಡೆದ ಕೃತ್ಯದ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಮತ್ತು ಕುಕ್ಕಿಕಟ್ಟೆ ಘಟನೆ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಸಿಸಿ ಕ್ಯಾಮರಾದಲ್ಲಿ ದೃಶ್ಯ ಪರಿಶೀಲಿಸಿದಾಗ ಒಂದೇ ತಂಡ ಈ ಮೂರು ಕೃತ್ಯಗಳನ್ನು ಎಸಗಿರುವುದು ದೃಢಪಟ್ಟಿದೆ. ಈ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net