

ಶಿವಮೊಗ್ಗ: ಮಹಿಳೆಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿರುವ ದೂರಿನ ಬಗ್ಗೆ ಚಿಕ್ಕಮಗಳೂರು ಪೊಲೀಸರ ಹೆಸರಲ್ಲಿ ಶಿವಮೊಗ್ಗ ತಾಲೂಕಿನ ಯುವಕನಿಗೆ ಕರೆ ಮಾಡಿ ಬೆದರಿಸಿ ಆನ್‌ಲೈನ್ ಮೂಲಕ 23 ಸಾವಿರ ರೂ. ಪಡೆದು ವಂಚಿಸಿದ್ದ ಮೂವರನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬನಶಂಕರಿಯ ಇಬ್ರಾಹಿಂ ಬಾದಷಾ ಅಲಿಯಾಸ್ ಸ್ಯಾಮ್ ರಿಷಿಕ್(26), ಕುಮಾರಸ್ವಾಮಿ ಲೇಔಟ್‌ನ ಜನಾರ್ಧನ (21) ಮತ್ತು ಹನುಮಂತ (38) ಬಂಧಿತರು. ಅವರಿಂದ 1,500 ರೂ. ನಗದು, ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಭಾನುವಾರ(ಜೂ.23) ಪ್ರದೀಪ್ ಎಂಬುವರ ಮೊಬೈಲ್‌ಗೆ ಕರೆ ಮಾಡಿದ್ದರು. ತಾವು ಚಿಕ್ಕಮಗಳೂರಿನ ಪೊಲೀಸರು ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ನೀವು ಮಹಿಳೆಗೆ ಅಶ್ಲೀಲವಾಗಿ ಮೆಸೇಜ್ ಮಾಡಿರುವ ಬಗ್ಗೆ ದೂರು ದಾಖಲಾಗಿದೆ. ಠಾಣೆಗೆ ಬರುವಂತೆ ಹೆದರಿಸಿದ್ದರು. ಬಳಿಕ ಸೆಟ್ಲಮೆಂಟ್ ಮಾಡಿಕೊಡುವುದಾಗಿ ಹೇಳಿ ಫೋನ್ ಪೇ ಮೂಲಕ 23 ಸಾವಿರ ರೂ. ಪಡೆದು ವಂಚಿಸಿದ್ದರು. ಈ ಬಗ್ಗೆ ಅನುಮಾನಗೊಂಡ ಪ್ರದೀಪ್ ಅವರು ಶಿವಮೊಗ್ಗ ಸಿಇಎನ್ ಠಾಣೆಗೆ ದೂರು ನೀಡಿದ್ದರು.
ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆ ಇನ್‌ಸ್ಪೆಕ್ಟರ್(ಪ್ರಭಾರ) ಎಚ್.ಎಂ.ಸಿದ್ದೇಗೌಡ, ಪಿಎಸ್‌ಐ ಬಸವರಾಜ ಬಿರಾದಾರ ನೇತೃತ್ವದಲ್ಲಿ ಎಎಸ್‌ಐ ವೈ.ಎಸ್.ವಿರುಪಾಕ್ಷಪ್ಪ, ಸಿಬ್ಬಂದಿ ಜಿ.ಜಿ.ಅವಿನಾಶ್, ಬಿ.ಧರ್ಮನಾಯ್ಕ, ಎಸ್.ಆರ್.ಸಚಿನ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.