

ನೆಲಮಂಗಲ: ಭಾರತ್ ಬಂದ್‌ಗೆ ತಾಲೂಕಿನಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ತಾಲೂಕಿನ ರೈತಹಿತಾರಕ್ಷಣಾ ಸಮಿತಿ ಹೊರತು ತಾಲೂಕಿನ ಕೆಲ ಕನ್ನಡಪರ ಸಂಘಟನೆಗಳು ಬಾಹ್ಯ ಬೆಂಬಲ ವ್ಯಕ್ತಪಡಿಸಿದ್ದರಿಂದ ಬಂದ್ ಸ್ಪಂದನೆ ವ್ಯಕ್ತವಾಗಲಿಲ್ಲ.
ಎಂದಿನಂತೆ ನಗರದಲ್ಲಿ ಜನ ಜೀವನ, ವ್ಯಾಪಾರ, ವಾಹನ ಸಂಚಾರ ಸಾಮಾನ್ಯವಾಗಿತ್ತು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಸಮಾವೇಶಗೊಂಡ ಹತ್ತಾರು ಮಂದಿ ರೈತರು ಮತ್ತು ಕೆಲ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಶಿರಸ್ತೇದಾರ್ ಎಂ.ವಿ.ಮಂಜುನಾಥ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬಂದ್‌ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಸಶಸ್ತ್ರಮೀಸಲು ಪಡೆ ಸಿಬ್ಬಂದಿಗಳ ಜತೆಗೆ ಸ್ಥಳೀಯ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.
ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ.ನಾಗರಾಜು, ಕರವೇ(ಪ್ರವೀಣ್‌ಶೆಟ್ಟಿಬಣ) ಉಪಾಧ್ಯಕ್ಷ ಉಮೇಶ್‌ಗೌಡ, ಕರ್ನಾಟಕ ರಣಧೀರರ ವೇದಿಕೆ ಅಧ್ಯಕ್ಷ ಶಂಕರ್‌ಗೌಡ, ಕರ್ನಾಟಕ ಜನಸೈನ್ಯೆ ಅಧ್ಯಕ್ಷ ಬಿ.ನರಸಿಂಹಯ್ಯ, ಗ್ರಾಮಾಂತರ ಜಿಲ್ಲಾಧ್ಯಕ್ಷ ವಾಜರಹಳ್ಳಿ ನವೀನ್, ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಟಿ.ಲಕ್ಷ್ಮೀವೆಂಕಟೇಶ್, ಸಂಚಾಲಕ ಟಿ.ತಿಮ್ಮೇಗೌಡ, ನಿರ್ದೇಶಕ ಎಚ್.ತಿಮ್ಮೇಗೌಡ, ಕಿಸಾನ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಬಿ.ಆರ್.ಪ್ರದೀಪ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಚೇತನ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.