

ಚಾಮರಾಜನಗರ: ಬಿಕೋ ಎನ್ನುತ್ತಿದ್ದ ರಸ್ತೆಗಳು, ಬಾಗಿಲು ತೆರೆಯದ ಅಂಗಡಿ-ಮುಂಗಟ್ಟುಗಳು, ಮನೆಯಿಂದ ಹೊರ ಬಾರದ ಸಾರ್ವಜನಿಕರು, ಎಲ್ಲೆಡೆ ಆವರಿಸಿದ್ದ ಮೌನ ‘ಜನತಾ ಕರ್ಯ್ೂ’ ಮೂಲಕ ಮಹಾಮಾರಿ ಕರೊನಾ ವಿರುದ್ಧ ಸಮರ ಸಾರಿತು.
ಪ್ರಧಾನಿ ನರೇಂದ್ರ ಮೋದಿ ಕಾನೂನಾತ್ಮಕವಾಗಿ ಹೇರದ ಕರ್ಯ್ೂ ಅನ್ನು ಜನರು ಸ್ವಯಂಪ್ರೇರಿತರಾಗಿ ಒಪ್ಪಿಕೊಂಡು ತಮ್ಮ ಆರೋಗ್ಯ ರಕ್ಷಣೆಗೆ ಮುಂದಾದ ಪರಿಣಾಮ ಜಿಲ್ಲೆಯಲ್ಲಿ ಜನತಾ ಕರ್ಯ್ೂಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಜಿಲ್ಲೆ ಮತ್ತು ತಾಲೂಕು ಕೇಂದ್ರಗಳ ಹೊರತಾಗಿಯೂ ಗ್ರಾಮೀಣ ಪ್ರದೇಶಗಳಲ್ಲೂ ಜನಜೀವನ ಸಂಪೂರ್ಣ ಸ್ತಬ್ಧಗೊಂಡಿತ್ತು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಅೋಷಿತ ಬಂದ್‌ವೊಂದು ಯಶಸ್ವಿಯಾಗಿ ಇತಿಹಾಸದ ಪುಟ ಸೇರಿದೆ.
ಮಾನಸಿಕವಾಗಿ ಸಿದ್ಧತರಾಗಿದ್ದರು!: ವಿಶ್ವವನ್ನೇ ತಲ್ಲಣಗೊಳಿಸಿರುವ ಕರೊನಾ ವೈರಸ್ ಸವಾಲು ಗೆಲ್ಲಲು ಜಿಲ್ಲೆಯ ಜನರು ಮಾನಸಿಕವಾಗಿ ಸಿದ್ಧರಿದ್ದರು. ಹೀಗಾಗಿಯೇ ಭಾನುವಾರದ ಜನತಾ ಕರ್ಯ್ೂಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಭಾನುವಾರ ಇಡೀ ದಿನ ಮನೆಯಲ್ಲೇ ಉಳಿಯುವ ದೃಢ ನಿರ್ಧಾರ ಮಾಡಿದ್ದ ನಾಗರಿಕರು ಹಿಂದಿನ ದಿನವಾದ ಶನಿವಾರ ಅಗತ್ಯವಿರುವ ವಸ್ತುಗಳನ್ನು ಮುಗಿಬಿದ್ದು ಖರೀದಿಸಿದರು. ಭಾನುವಾರ ಬೆಳಗ್ಗೆ 7 ಗಂಟೆಗೂ ಮುನ್ನವೇ ವಾಯುವಿಹಾರಕ್ಕೆ ತೆರಳಿ ಹಾಲು ಮತ್ತು ಪತ್ರಿಕೆ ಖರೀದಿಸಿ ಮನೆ ಸೇರಿದವರು ರಾತ್ರಿ 9 ಗಂಟೆಯವರೆಗೂ ಹೊರಗೆ ಕಾಣಿಸಿಕೊಳ್ಳಲಿಲ್ಲ.
ಮಹನೀಯರ ಜಯಂತಿ, ಮತದಾನ ದಿನ, ಹಬ್ಬ ಮತ್ತು ಇತರ ವಿಶೇಷ ದಿನಗಳಲ್ಲಿ ಸ್ನೇಹಿತರು, ಸಂಬಂಧಿಕರ ಮನೆಗೆ ಹೋಗುತ್ತಿದ್ದವರೂ ತಮ್ಮ ಆಲೋಚನೆಗಳನ್ನು ಬದಿಗೊತ್ತಿ 14 ಗಂಟೆಗಳ ಕಾಲ ಮನೆಯಲ್ಲೇ ಉಳಿದರು. ನೆರೆ ರಾಜ್ಯ ಕೇರಳ ಹುಟ್ಟಿಸಿರುವ ಕರೊನಾ ಆತಂಕ ಮತ್ತು ಶನಿವಾರ ನೆರೆಯ ಮೈಸೂರು ಜಿಲ್ಲೆಯಲ್ಲಿ ಕರೊನಾ ಪ್ರಕರಣವೊಂದು ಪತ್ತೆಯಾಗಿರುವುದು, ದಿನನಿತ್ಯ ರಾಜ್ಯದಲ್ಲಿ ಕರೊನಾ ಕಬಂಧಬಾಹು ಚಾಚಿಕೊಳ್ಳುತ್ತಿರುವ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಜಿಲ್ಲೆಯ ಜನರು ಕರೊನಾ ಮಣಿಸಲು ಸ್ವಯಂಪ್ರೇರಿತರಾಗಿ ಗೃಹಬಂಧನಕ್ಕೊಳಗಾದರು.
ಬಾಗಿಲು ‘ಬಂದ್’: ಭಾನುವಾರ ನಗರದ ಅಂಗಡಿ-ಮುಂಗಟ್ಟುಗಳ ಬಾಗಿಲು ಬಂದ್ ಮಾಡಲಾಗಿತ್ತು. ಡಾ.ಬಿ.ರಾಚಯ್ಯ ಜೋಡಿ ರಸ್ತೆ, ದೊಡ್ಡಂಗಡಿ ಮತ್ತು ಚಿಕ್ಕಂಗಡಿ ಬೀದಿ, ಗುಂಡ್ಲುಪೇಟೆ ವೃತ್ತ, ಸಂತೇಮರಹಳ್ಳಿ ವೃತ್ತ, ಶ್ರೀಭುವನೇಶ್ವರಿ ವೃತ್ತ, ಖಾಸಗಿ ಬಸ್ ನಿಲ್ದಾಣ ರಸ್ತೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ರಸ್ತೆ ಸೇರಿದಂತೆ ಬಡಾವಣೆಗಳಲ್ಲಿ ಇರುವ ಅಂಗಡಿಗಳೂ ಬಾಗಿಲು ಹಾಕಿದ್ದವು.
ಪ್ರತಿ ಭಾನುವಾರ ಅಂಗಡಿಗಳನ್ನು ರಜೆ ಮಾಡುವುದು ಸಹಜ. ಆದರೆ ಜನತಾ ಕರ್ಯ್ೂ ಹಿನ್ನೆಲೆ ನಗರದಲ್ಲಿರುವ ಎಲ್ಲ ಮಳಿಗೆಗಳೂ ಬಾಗಿಲು ಮುಚ್ಚಿದುದು ಬಂದ್ ವಾತಾವರಣವನ್ನು ಸ್ಮರಿಸುವಂತೆ ಮಾಡಿತು. ಪ್ರತಿದಿನ ಗುಂಡ್ಲುಪೇಟೆ ವೃತ್ತದಲ್ಲಿ ಕೂಲಿ ಕೆಲಸಕ್ಕೆ ತೆರಳಲು ಗುಂಪುಗೂಡುತ್ತಿದ್ದ ಕಾರ್ಮಿಕರು ಭಾನುವಾರ ಕಂಡು ಬರಲಿಲ್ಲ.
ಈ ಮಧ್ಯೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬೆಳಗ್ಗೆ 7 ಗಂಟೆ ವೇಳೆಯಲ್ಲಿ ಬಾಗಿಲು ತೆರೆದಿದ್ದ ಟೀ ಅಂಗಡಿಯನ್ನು ಪೊಲೀಸರು ಮುಚ್ಚಿಸಿದರು ಎಂದು ತಿಳಿದುಬಂದಿದೆ. ಚರ್ಚ್‌ಗಳಲ್ಲಿ ಭಾನುವಾರದ ಪ್ರಾರ್ಥನೆಗಳು ನಡೆಯಲಿಲ್ಲ.
ಬಿಕೋ ಎನ್ನುತ್ತಿದ್ದ ರಸ್ತೆಗಳು: ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳ ಸೇವೆಯನ್ನು ಸ್ಥಗಿತಗೊಳಿಸಿದ ಪರಿಣಾಮ ಭಾನುವಾರ ಬಸ್‌ಗಳ ಸಂಚಾರ ಕಂಡು ಬರಲಿಲ್ಲ. ಸಾರ್ವಜನಿಕರು ಕೂಡ ಮನೆಗಳಿಂದ ಹೊರಬರದೆ ಇದ್ದುದ್ದರಿಂದ ರಸ್ತೆಗಳಲ್ಲಿ ವಾಹನಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು. ಸಂಪೂರ್ಣವಾಗಿ ಖಾಲಿ ಹೊಡೆಯುತ್ತಿದ್ದ ರಸ್ತೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಎಂಬಂತೆ ಕೆಲವು ವಾಹನಗಳು ಸಂಚರಿಸಿದವು. ಈ ಮಧ್ಯೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ರಸ್ತೆಯಲ್ಲಿ ಅನಗತ್ಯವಾಗಿ ಬೈಕ್ ರೈಡಿಂಗ್ ಮಾಡುತ್ತಿದ್ದ ಕೆಲ ಯುವಕರಿಗೆ ಪೊಲೀಸರು ಎಚ್ಚರಿಕೆ ನೀಡಿದರು. ಈ ಮಧ್ಯೆ ನಗರದ ವಾಲ್ಮೀಕಿ ಭವನದಲ್ಲಿ ಮದುವೆಯೊಂದು ನಡೆಯಿತು. ವಿವಾಹ ಮಹೋತ್ಸವದಲ್ಲಿ ಬೆರಳೆಣಿಕೆಷ್ಟು ಜನ ಮಾತ್ರ ಇದ್ದರು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್‌ಕುಮಾರ್ ಅವರು ಬೆಳಗ್ಗೆ ನಗರದೆಲ್ಲೆಡೆ ಸಂಚರಿಸಿ ಜನತಾ ಕರ್ಯ್ೂ ಅನ್ನು ಪರಿಶೀಲಿಸಿದರು.
ಅಗತ್ಯ ಸೇವೆಗಳಿಗೂ ಅಡ್ಡಿ: ಜನತಾ ಕರ್ಯ್ೂ ದಿನ ಜಿಲ್ಲೆಯಲ್ಲಿ ಅಗತ್ಯ ಸೇವೆಗಳಿಗೆ ಅಡ್ಡಿ ಉಂಟಾಯಿತು. ಜಿಲ್ಲಾಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಹೊರತುಪಡಿಸಿ ಹೊರ ರೋಗಿಗಳ ಚಿಕಿತ್ಸಾ ವಿಭಾಗವನ್ನು ಬಂದ್ ಮಾಡಲಾಗಿತ್ತು. ಕೆಲವೆಡೆ ಹಾಲು ಮಾರಾಟ ಕೇಂದ್ರಗಳು ಬಾಗಿಲು ತೆರೆಯದ ಹಿನ್ನೆಲೆ ಹಾಲಿನ ಕೃತಕ ಅಭಾವ ಸೃಷ್ಟಿಯಾಯಿತು.
ಚಾಮರಾಜನಗರದ ಸಂಪಿಗೆ ರಸ್ತೆಯಲ್ಲಿ ಬೆಳಗ್ಗೆ 6.30ಕ್ಕೆ ತೆರೆದಿದ್ದ ನಂದಿನಿ ಹಾಲಿನ ಮಳಿಗೆಯ ಮುಂದೆ ಸಾರ್ವಜನಿಕರು ಸಾಲುಗಟ್ಟಿ ನಿಂತು ಹಾಲು ಖರೀದಿ ಮಾಡಿದ ದೃಶ್ಯಕಂಡು ಬಂದಿತು.
ಉಳಿದಂತೆ ಔಷಧ ಅಂಗಡಿಗಳು ಸಾಮಾನ್ಯ ದಿನಗಳಿಗಿಂತಲೂ ಬೇಗನೇ ಅಂಗಡಿಗಳನ್ನು ತೆರೆದಿದ್ದವು. ಪೆಟ್ರೋಲ್ ಬಂಕ್‌ಗಳಲ್ಲಿ ಎಂದಿನಂತೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ಆದರೆ ವಾಹನಗಳ ಸಂಚಾರವೆ ಇಲ್ಲದ ಕಾರಣ ಬಂಕ್‌ಗಳೂ ಖಾಲಿ ಹೊಡೆಯುತ್ತಿತ್ತು.