ಕಾಲುವೆಗೆ ನೀರು ಹರಿಸುವ ಅವಧಿ ವಿಸ್ತರಣೆ

Extension of the period for pouring water into the canal
Published on

ಆಲಮಟ್ಟಿ: ಕಾಲುವೆಯ ಕೊನೇ ಭಾಗಕ್ಕೆ ನೀರು ತಲುಪುತ್ತಿಲ್ಲ ಎಂಬ ನಾರಾಯಣಪುರ ಭಾಗದ ರೈತರ ಬೇಡಿಕೆಗೆ ಸ್ಪಂದಿಸಿ ನಾರಾಯಣಪುರ ಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ಮಾ.25ರ ವರೆಗೆ ನಿರಂತರ ಕಾಲುವೆ ನೀರು ಹರಿಸಲು ನಿರ್ಧರಿಸಲಾಗಿದೆ.

ಯುಕೆಪಿ ನೀರಾವರಿ ಸಲಹಾ ಸಮಿತಿ(ಐಸಿಸಿ) ಅಧ್ಯಕ್ಷ, ಸಚಿವ ಆರ್.ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಎಲ್ಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ, ಕೃಷಿ ಅಧಿಕಾರಿ, ಕೆಬಿಜೆಎನ್‌ಎಲ್ ಅಧಿಕಾರಿಗಳ ವಿಡಿಯೋ ಸಂವಾದದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಐಸಿಸಿ ಸಭೆಯಲ್ಲಿ ಮಾ.22ರ ವರೆಗೆ ನೀರು ಹರಿಸಿ ಮಾ.23ರಿಂದ ಮಾ.31ರ ವರೆಗೆ ವಾರಾಬಂಧಿ ಮಾಡಿ ಮುಂದೆ ಏ.1 ರಿಂದ ಏ.6 ರ ವರೆಗೆ ನೀರು ಹರಿಸಲು ನಿರ್ಧರಿಸಲಾಗಿತ್ತು. ಆದರೆ, ಇದಕ್ಕೆ ನಾರಾಯಣಪುರ ಭಾಗದ ರೈತರು ವಿರೋಧ ವ್ಯಕ್ತಪಡಿಸಿದ್ದರು. ವಾರಾಬಂಧಿ ರದ್ದುಗೊಳಿಸಿ ನಮ್ಮ ಭಾಗಕ್ಕೆ ನಿಗದಿಗೊಳಿಸಿದ ನೀರನ್ನು ನಿರಂತರ ಹರಿಸಲು ಆಗ್ರಹಿಸಿದ್ದರು.

ನೀರಾವರಿಗೆ ಲಭ್ಯವಿರುವ 5 ಟಿಎಂಸಿಯಲ್ಲಿ ನಾರಾಯಣಪುರ ಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ನೀರಿನ ಅಗತ್ಯ ಹೆಚ್ಚಿದ್ದು, ಅದಕ್ಕಾಗಿ ಮಾ.25 ರ ಬೆಳಗಿನ ಜಾವದವರೆಗೆ ನಿರಂತರ ನೀರು ಹರಿಸಲು ನಿರ್ಧರಿಸಲಾಗಿದೆ.

ಆಲಮಟ್ಟಿ ಅಚ್ಚುಕಟ್ಟು ಪ್ರದೇಶದ ನೀರಾವರಿ ಯೋಜನೆಗಳಿಗೆ ಮಾ.23 ರಿಂದ ಮಾ.31 ರವರೆಗೆ ನೀರು ಸ್ಥಗಿತಗೊಳಿಸಿ, ಏ.1 ರಿಂದ ಏ.5 ರ ವರೆಗೆ ಮಾತ್ರ ನೀರು ಹರಿಸಲು ತೀರ್ಮಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net