ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿತೆರಿಗೆ ಪಾವತಿಸಲು ಗಡುವು ವಿಸ್ತರಣೆ

Vijayavani-Featured-Image
Published on

ಬೆಂಗಳೂರು: ರಾಜ್ಯದ ನಗರ ಸಂಸ್ಥೆಗಳಾದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿರುವ ಸ್ವತ್ತುದಾರರು ತಮ್ಮ 2024-25ನೇ ಸಾಲಿನ ಆಸ್ತಿತೆರಿಗೆಯನ್ನು ಶೇ.5 ರಿಯಾಯಿತಿಯೊಂದಿಗೆ ಪಾವತಿಸಲು ಜು.31ರವರೆಗೆ ಗಡುವು ವಿಸ್ತರಿಸಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಜು.13ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಿದೆ. ಇದರಲ್ಲಿ ಸಾವಿರಾರು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದೆ. ಒಂದೊಮ್ಮೆ ಶೇ.5 ರಿಯಾಯಿತಿಯನ್ನು ಲೋಕ ಅದಾಲತ್ ನಡೆಯುವವರೆಗೂ ಮುಂದೂಡಿದರೆ ಆಸ್ತಿ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿತೆರಿಗೆ ಪಾವತಿಸಲು ಸಾಧ್ಯವಾಗಲಿದೆ ಎಂಬುದಾಗಿ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷರ ನಿರ್ದೇಶನದ ಮೇರೆಗೆ ಸದಸ್ಯ ಕಾರ್ಯದರ್ಶಿ ಎಂ.ಎಲ್. ರಘುನಾಥ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದರು. ಪತ್ರವನ್ನು ಮಾನ್ಯ ಮಾಡಿರುವ ನಗರಾಭಿವೃದ್ಧಿ ಇಲಾಖೆ ರಿಯಾಯಿತಿಯೊಂದಿಗೆ ಆಸ್ತಿತೆರಿಗೆ ಪಾವತಿಸಲು ಕಾಲಾವಕಾಶ ವಿಸ್ತರಿಸಿದೆ.

ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ 61 ನಗರಸಭೆ, 124 ಪುರಸಭೆ ಹಾಗೂ 115 ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಲಕ್ಷಾಂತರ ಸಂಖ್ಯೆಯ ಸ್ವತ್ತುದಾರರಿಗೆ ಅನುಕೂಲವಾಗಲಿದೆ.

ಇಂತಹ ಅವಕಾಶ ಸದ್ಯ ಬಿಬಿಎಂಪಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಜತೆಗೆ ಹಿಂದಿನ ವರ್ಷದ ಬಾಕಿ ಪಾವತಿಗೂ ಒಂದು ಬಾರಿ ಪಾವತಿ ಉಪಕ್ರಮಕ್ಕೂ (ಒಟಿಎಸ್) ಅವಕಾಶ ಇದೆ. ಆದರೆ, ನಗರ ಸ್ಥಳೀಯ ಸಂಸ್ಥೆಗಳಿಗೆ ಹಾಲಿ ಸಾಲಿನ ಆಸ್ತಿತೆರಿಗೆ ಮೇಲಿನ ಶೇ. 5 ರಿಯಾಯಿತಿ ಮಾತ್ರ ಅನ್ವಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net