ಎನಿವೇರ್ ಆಸ್ತಿ ನೋಂದಣಿ ವ್ಯವಸ್ಥೆ ಜಿಲ್ಲೆಗೂ ವಿಸ್ತರಣೆ

Published on

ಮೈಸೂರು: ಎಲ್ಲಿ ಬೇಕಾದರೂ (ಎನಿವೇರ್) ಆಸ್ತಿ ನೋಂದಣಿ ವ್ಯವಸ್ಥೆಯನ್ನು ಜಿಲ್ಲೆಯಲ್ಲಿಯೂ ವಿಸ್ತರಣೆ ಮಾಡಲಾಗಿದ್ದು, ಆಸ್ತಿ ನೊಂದಣಿ ಮಾಡಿಸಿಕೊಳ್ಳುವವರಿಗೆ ಉಪಯೋಗವಾಗಲಿದೆ.
ಸ್ಥಿರಾಸ್ತಿ ಇರುವ ಜಿಲ್ಲೆಯ ಯಾವುದೇ ಉಪ ನೋಂದಣಿ ಕಚೇರಿಯಲ್ಲಿ ಸೂಕ್ತ ದಸ್ತಾವೇಜನ್ನು ನೀಡಿ ನೋಂದಣಿ ಮಾಡಿಸಿಕೊಳ್ಳಬಹುದು. ಈ ಹಿಂದೆ ಸ್ಥಿರಾಸ್ತಿ ವ್ಯಾಪ್ತಿಯ ಉಪ ನೋಂದಣಿ ಕಚೇರಿಯಲ್ಲಿ ಮಾತ್ರವೇ ಆಸ್ತಿ ನೋಂದಣಿಗೆ ಅವಕಾಶವಿತ್ತು. ರಾಜ್ಯದಲ್ಲಿ ಈಗ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿಗೊಳಿಸಿದ್ದು, ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಿದೆ. ಹಾಗಾಗಿ, ಜಿಲ್ಲೆಯಲ್ಲಿಯೂ ಎನಿವೇರ್ ನೋಂದಣಿ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಜಿಲ್ಲೆಯ ಯಾವುದೇ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಬಹುದಾಗಿದೆ.
ಪ್ರಸ್ತುತ ಸಾರ್ವಜನಿಕರು ಸ್ಥಿರಾಸ್ತಿ ಇರುವ ವ್ಯಾಪ್ತಿಯ ಉಪ ನೋಂದಣಿ ಕಚೇರಿಯಲ್ಲಿ ಮಾತ್ರ ದಸ್ತಾವೇಜನ್ನು ನೋಂದಣಿ ಮಾಡಲು ಅವಕಾಶವಿದೆ. ಆದರೆ, ಎನಿವೇರ್ ನೋಂದಣಿಯಲ್ಲಿ ದಸ್ತಾವೇಜನ್ನು ಸ್ಥಿರಾಸ್ತಿ ಇರುವ ಜಿಲ್ಲೆಯ ಯಾವುದಾದರೂ ಉಪ ನೋಂದಣಿ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಹುದಾಗಿದೆ. ಎನಿವೇರ್ ನೋಂದಣಿ ವ್ಯವಸ್ಥೆಯು ಸಾರ್ವಜನಿಕರಿಗೆ ಹಲವು ರೀತಿಯಲ್ಲಿ ಉಪಯುಕ್ತವಾಗಿದ್ದು, ದಸ್ತಾವೇಜಿನ ನೋಂದಣಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ನೋಂದಣಿಯಲ್ಲಿ ವಿಳಂಬವನ್ನು ತಡೆಗಟ್ಟುತ್ತದೆ. ಸಾರ್ವಜನಿಕರು ಸಮೀಪದಲ್ಲಿರುವ ಉಪ ನೋಂದಣಿ ಕಚೇರಿಯಲ್ಲಿ ದಸ್ತಾವೇಜನ್ನು ನೋಂದಾಯಿಸಬಹುದು.
ಅಲ್ಲದೆ ಸ್ಲಾಟ್ ಲಭ್ಯವಿರುವಂತಹ ಕಚೇರಿಯನ್ನು ನೋಂದಣಿಗೆ ಆಯ್ಕೆ ಮಾಡಿಕೊಳ್ಳಬಹುದು. ನೋಂದಣಿ ಪ್ರಕ್ರಿಯೆ ಸುಲಭವಾಗುವುದಲ್ಲದೆ ಸಮಯವು ಸಹ ಉಳಿಯುತ್ತದೆ. ಉಪ ನೋಂದಣಿ ಕಚೇರಿಗಳಲ್ಲಿ ಜನದಟ್ಟಣೆ ಕಡಿಮೆಯಾಗುತ್ತದೆ. ಕಚೇರಿ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಕಡಿಮೆಯಾಗುತ್ತದೆ ಹಾಗೂ ಕಚೇರಿಗಳಲ್ಲಿ ನೋಂದಣಿ ಕೆಲಸ ಸಮಾನವಾಗಿ ಹಂಚಿಕೆಯಾಗುತ್ತದೆ.
ಆದ್ದರಿಂದ ಸಾರ್ವಜನಿಕರು ಎನಿವೇರ್ ನೋಂದಣಿಯ ಸದುಪಯೋಗಪಡಿಸಿಕೊಂಡು ತಮಗೆ ಹತ್ತಿರದ ಅಥವಾ ನೋಂದಣಿಗೆ ಸ್ಲಾಟ್ ಲಭ್ಯವಿರುವಂತಹ ಕಚೇರಿ ಆಯ್ಕೆ ಮಾಡಿಕೊಂಡು ದಸ್ತಾವೇಜನ್ನು ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net