ಕೋರ್ಟ್ ಆವರಣದಲ್ಲೇ ಸಿಗಲಿದೆ ಚಿಕಿತ್ಸೆ: ನ್ಯಾಯಾಂಗ, ಆರೋಗ್ಯ ಇಲಾಖೆಯಿಂದ ಯೋಜನೆ ಜಾರಿ

Extension clinic launched Mandya
Published on

ಮಂಡ್ಯ: ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ವಿಚಾರಣೆ ಹಾಜರಾಗುವ ಹಾಗೂ ವಿವಿಧ ಕಾರಣಕ್ಕೆ ನಗರದಲ್ಲಿರುವ ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನ್ಯಾಯಾಂಗ ಹಾಗೂ ಆರೋಗ್ಯ ಇಲಾಖೆಯಿಂದ ವಿಸ್ತರಣಾ ಚಿಕಿತ್ಸಾಲಯವನ್ನು ಪ್ರಾರಂಭಿಸಲಾಗಿದೆ.

ಪ್ರತಿದಿನ ನ್ಯಾಯಾಲಯಕ್ಕೆಂದು ನಗರ ಮಾತ್ರವಲ್ಲದೆ ದೂರದ ಹಳ್ಳಿಗಳಿಂದಲೂ ಜನರು ಆಗಮಿಸುತ್ತಾರೆ. ಈ ವೇಳೆ ಜ್ವರ, ಸುಸ್ತು, ರಕ್ತದೊತ್ತಡ ಸೇರಿದಂತೆ ಕೆಲ ಸಮಸ್ಯೆಯಿಂದಾಗಿ ಆರೋಗ್ಯ ತಪ್ಪಿರುವ ಉದಾಹರಣೆಗಳಿವೆ. ಇಂತಹವರಿಗೆ ನೆರವಾಗಲೆಂದು ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ.

ಜನರಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಸೌಕರ್ಯ ಒದಗಿಸುವಂತೆ ನ್ಯಾಯಾಧೀಶರು ನೀಡಿದ ಸಲಹೆ ಮೇರೆಗೆ ಆರೋಗ್ಯ ಇಲಾಖೆ ಕಾರ್ಯಪ್ರೌವೃತ್ತರಾಯಿತು. ಅದರಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಅವರು ಇದರ ಬಗ್ಗೆ ಯೋಜನೆ ರೂಪಿಸಿ ‘ವಿಸ್ತರಣಾ ಚಿಕಿತ್ಸಾಲಯ’ ಪ್ರಾರಂಭಿಸುವ ಬಗ್ಗೆ ನ್ಯಾಯಾಧೀಶರ ಗಮನಕ್ಕೆ ತಂದರು. ಇದಕ್ಕೆ ಅವರಿಂದ ಒಪ್ಪಿಗೆ ಸಿಕ್ಕಿತು. ಬಳಿಕ ನ್ಯಾಯಾಲಯದ ಆವರಣದ ಸಂಕೀರ್ಣದಲ್ಲಿಯೇ ಚಿಕಿತ್ಸಾಲಯ ತೆರೆಯಲು ಸಿದ್ಧತೆ ನಡೆಯಿತು. ಅಂದಾಜು 30 ರಿಂದ 40 ಸಾವಿರ ರೂ ವೆಚ್ಚದಲ್ಲಿ ಕೊಠಡಿಗಳಲ್ಲಿ ಸೌಕರ್ಯ ಕಲ್ಪಿಸಲಾಯಿತು. ಈ ಚಿಕಿತ್ಸಾಲಯಕ್ಕೆ ಬುಧವಾರ ನ್ಯಾಯಾಧೀಶರು ಚಾಲನೆ ನೀಡಿದರು.

ಕಾರ್ಯ ಚಟುವಟಿಕೆ ಹೇಗೆ?: ಚಿಕಿತ್ಸಾಲಯಕ್ಕೆ ಸಂಬಂಧಿಸಿದಂತೆ ನಿರ್ವಹಣೆಯ ಸಂಪೂರ್ಣ ಹೊಣೆಗಾರಿಕೆ ಆರೋಗ್ಯ ಇಲಾಖೆ ವಹಿಸಿಕೊಳ್ಳಲಿದೆ. ಕೋರ್ಟ್ ಕಲಾಪ ನಡೆಯುವ ದಿನ ಹಾಗೂ ಪೂರ್ಣ ಅವಧಿಯೂ ಚಿಕಿತ್ಸೆ ಸಿಗಲಿದೆ. ಇದಕ್ಕೆಂದು ಸಮುದಾಯ ಆರೋಗ್ಯ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಇಲ್ಲಿ ಪ್ರಾಥಮಿಕ ಚಿಕಿತ್ಸೆ ಲಭ್ಯವಿರಲಿದೆ. ಬಿಪಿ, ಷುಗರ್, ಸುಸ್ತು, ಜ್ವರ, ವಾಂತಿ ಸೇರಿದಂತೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಸಿಗಲಿದೆ. ಈ ಕೇಂದ್ರಕ್ಕೆಂದು ಆರೋಗ್ಯ ಇಲಾಖೆಯಿಂದ ಔಷಧಗಳ ಪೂರೈಕೆ ಮಾಡಲಾಗುತ್ತಿದೆ.

ಪ್ರಾಥಮಿಕ ಚಿಕಿತ್ಸೆಯ ನಂತರ ಹೆಚ್ಚುವರಿಗೆ ಚಿಕಿತ್ಸೆ ಅಗತ್ಯವಿದ್ದರೆ ಮಿಮ್ಸ್‌ಗೆ ರವಾನಿಸಲಾಗುವುದು. ಇದಲ್ಲದೆ ಮುಂದಿನ ದಿನದಲ್ಲಿ ಇನ್ನಷ್ಟು ಸೌಲಭ್ಯ ಕಲ್ಪಿಸುವ ಯೋಚನೆ ಇದೆ. ಅಂತೆಯೇ ದಿನಕ್ಕೆ ಒಬ್ಬರಂತೆ ವೈದ್ಯರ ನಿಯೋಜನೆಗೂ ಚಿಂತನೆ ಮಾಡಲಾಗಿದೆ. ಹೃದಯ ವೈಶಾಲ್ಯ, ಆಶಾಕಿರಣ ಸೇರಿದಂತೆ ವಿಶೇಷ ಯೋಜನೆ ಅನುಷ್ಠಾನಗೊಳಿಸಿದ ಜಿಲ್ಲಾ ಆರೋಗ್ಯ ಇಲಾಖೆ ಇದೀಗ ಮತ್ತೊಂದು ಉತ್ತಮ ಕಾರ್ಯಕ್ರಮ ರೂಪಿಸಿದೆ.

ಒಟ್ಟಾರೆ ದಿಢೀರ್ ಆರೋಗ್ಯ ಸಮಸ್ಯೆ ಎದುರಾದಾಗ ಆ ವ್ಯಕ್ತಿಗೆ ಪ್ರತಿ ಕ್ಷಣವೂ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ನಿರ್ಣಯ ಅತ್ಯುತ್ತಮ ಎನಿಸಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೊಳಪಟ್ಟಿದೆ.

ಹಾಲುಣಿಸಲು ಪ್ರತ್ಯೇಕ ಕೊಠಡಿ

ಎರಡು ಇಲಾಖೆಯಿಂದ ಅನುಷ್ಠಾನಗೊಂಡಿರುವ ಯೋಜನೆಯಲ್ಲಿ ಇದೊಂದು ಉತ್ತಮ ಕೆಲಸವಾಗಿದೆ. ಬಾಣಂತಿಯರು ನ್ಯಾಯಾಲಯಕ್ಕೆ ಬಂದಂತಹ ಸಂದರ್ಭದಲ್ಲಿ ಹಸುಗೂಸನ್ನು ನೋಡಿಕೊಳ್ಳುವುದು ಸವಾಲಿನ ಕೆಲಸ. ಅದರಲ್ಲಿಯೂ ಮಕ್ಕಳಿಗೆ ಹಾಲುಣಿಸಲು ಸಮಸ್ಯೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹಾಲುಣಿಸಲು ಅನುಕೂಲವಾಗುವಂತೆಯೂ ಪ್ರತ್ಯೇಕ ಕೊಠಡಿ ತೆರೆಯಲಾಗಿದೆ.

ಇದಲ್ಲದೆ ಪುಟ್ಟ ಮಕ್ಕಳನ್ನು ನಿರ್ವಹಣೆ ಮಾಡಲು ಸಹಕಾರಿಯಾಗುವಂತೆ ಇನ್ನೊಂದು ಕೊಠಡಿ ಪ್ರಾರಂಭಿಸಲಾಗಿದೆ. ಮಾತ್ರವಲ್ಲದೆ ಮಕ್ಕಳು ಆಟವಾಡಲು ವಿವಿಧ ಆಟಿಕೆಗಳನ್ನು ಇಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಸುಮಾರು 25 ಸಾವಿರ ರೂ ವೆಚ್ಚದಲ್ಲಿ ಆಟಿಕೆಗಳನ್ನು ಪೂರೈಕೆ ಮಾಡಲಾಗಿದೆ. ಇವುಗಳನ್ನು ಬಳಸಿಕೊಂಡು ಮಕ್ಕಳನ್ನು ನಿರ್ವಹಣೆ ಮಾಡಲು ತಾಯಂದಿರಿಗೆ ಅನುಕೂಲವಾಗಲಿದೆ.

Extension clinic launched Mandya

ಇಸಿಜಿ ತಪಾಸಣೆಗೂ ವ್ಯವಸ್ಥೆ

ಆರೋಗ್ಯ ಇಲಾಖೆ ಮೊದಲ ಹಂತದಲ್ಲಿ ಪ್ರಾಥಮಿಕ ಚಿಕಿತ್ಸೆ ಹಾಗೂ ಮಕ್ಕಳಿಗೆ ಹಾಲುಣಿಸಲು ಅನುಕೂಲವಾಗುವಂತೆ ಸೌಕರ್ಯ ಕಲ್ಪಿಸಲಾಗಿದೆ. ಅದೇ ರೀತಿ ಮುಂದಿನ ಹಂತದಲ್ಲಿ ಇಸಿಜಿ ತಪಾಸಣೆ ಮಾಡಲು ಅಗತ್ಯವಿರುವ ಸೌಲಭ್ಯ ಕೊಡಲು ಸಿದ್ಧತೆ ಮಾಡಿಕೊಳ್ಳಲಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್ ಅವರು ಸಿಎಸ್‌ಆರ್ ಅನುದಾನ ಪಡೆದುಕೊಂಡು ಸುಮಾರು 35 ರಿಂದ 40 ಸಾವಿರ ರೂ ಮೌಲ್ಯದ ಸಿಂಗಲ್ ಪಿಂಗರ್ ಬೇಸ್ ಇಸಿಜಿ ಯಂತ್ರ ಖರೀದಿ, ಅದನ್ನು ವಿಸ್ತರಣಾ ಚಿಕಿತ್ಸಾಲಯಕ್ಕೆ ಅಳವಡಿಕೆ ಮಾಡುವ ಯೋಚನೆ ರೂಪಿಸಿದ್ದಾರೆ. ಇದು ಕೂಡ ಸಾಧ್ಯವಾದಷ್ಟು ತ್ವರಿತವಾಗಿ ಅನುಷ್ಠಾನವಾದರೆ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.

Dho-Dr.K.Mohan

ನ್ಯಾಯಾಧೀಶರು ನೀಡಿದ ಸಲಹೆ ಮೇರೆಗೆ ಕೋರ್ಟ್ ಸಂರ್ಕೀಣದಲ್ಲಿ ಆರೋಗ್ಯ ಇಲಾಖೆಯಿಂದ ವಿಸ್ತರಣಾ ಚಿಕಿತ್ಸಾಲಯ ತೆರೆಯಲಾಗಿದೆ. ಇಲ್ಲಿಗೆ ಸಮುದಾಯ ಆರೋಗ್ಯ ಅಧಿಕಾರಿಯನ್ನು ನಿಯೋಜಿಸಲಾಗಿದ್ದು, ಜನರಿಗೆ ಪ್ರಾಥಮಿಕ ಚಿಕಿತ್ಸೆ ಸಿಗಲಿದೆ. ಇದಕ್ಕೆ ಅಗತ್ಯವಿರುವ ಔಷಧವನ್ನು ಇಲಾಖೆಯಿಂದ ಪೂರೈಕೆ ಮಾಡಲಾಗುವುದು. ಇದರೊಟ್ಟಿಗೆ ಮಕ್ಕಳಿಗೆ ಹಾಲುಣಿಸಲು ಅನುಕೂಲವಾಗುವಂತೆಯೂ ಪ್ರತ್ಯೇಕ ಕೊಠಡಿ ಹಾಗೂ ಆಟವಾಡಲು ಇನ್ನೊಂದು ಕೊಠಡಿ ಇದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಆಟದ ಸಾಮಗ್ರಿ ಪೂರೈಕೆ ಮಾಡಲಾಗಿದೆ. ಡಾ.ಕೆ.ಮೋಹನ್ ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net