

ಕಾಸರಗೋಡು: ಹಿಂದು ಸಂಸ್ಕಾರ ಹಾಗೂ ವೇದಗಳ ಬಗ್ಗೆ ಮಕ್ಕಳಿಗೆ ಬೋಧನೆ ನೀಡುವ ಮೂಲಕ ದೇಶದ ಪರಂಪರೆಯನ್ನು ಮುಂದಿನ ಪೀಳಿಗೆಗೆ ವಿಸ್ತರಿಸಲು ಸಾಧ್ಯ ಎಂಬುದಾಗಿ ಕುಂಟಾರು ರವೀಶ ತಂತ್ರಿ ತಿಳಿಸಿದ್ದಾರೆ.
ವಿಶ್ವಜ್ಞಾನ ಸಂಘ ಟ್ರಸ್ಟ್ ನೇತೃತ್ವದಲ್ಲಿ ವಿಶ್ವದಲ್ಲಿಯೇ ಮೊದಲ ಬಾರಿಗೆ ಕಾಸರಗೋಡು ಚೌಕಿ ಕಾವುಗೋಳಿ ಶ್ರೀ ಶಿವ ದೇವಾಲಯ ವಠಾರದಲ್ಲಿ ನ.17ರಿಂದ 26ರ ವರೆಗೆ ಜರುಗಲಿರುವ ಚತುರ್ವೇದ ಜ್ಞಾನ ಮಹಾಯಜ್ಞದ ಅಂಗವಾಗಿ ಶನಿವಾರ ನಡೆದ ನಕ್ಷತ್ರವನ ನಿರ್ಮಾಣಕ್ಕಾಗಿ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸಿದ್ದರು. ತ್ರಿಶ್ಯೂರ್ ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ಬ್ರಹ್ಮಸ್ವರೂಪಾನಂದಪುರಿ ಆಶೀರ್ವಚನ ನೀಡಿದರು. ಮಹಾಯಜ್ಞದ ಸ್ವಾಗತ ಸಮಿತಿ ಕಚೇರಿಯನ್ನು ಅನಿವಾಸಿ ಉದ್ಯಮಿ ವಿಜಯನ್ ಕರಿಪ್ಪೊಡಿ ಉದ್ಘಾಟಿಸಿದರು. ಆರೆಸ್ಸೆಸ್ ಕಾಸರಗೋಡು ಜಿಲ್ಲಾ ಸಂಘಚಾಲಕ್ ಪ್ರಭಾಕರನ್ ಮಾಸ್ಟರ್ ನಕ್ಷತ್ರ ವನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಟ್ರಸ್ಟ್ ಅಧ್ಯಕ್ಷ ಒ.ಕೆ.ಜಯಚಂದ್ರನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಅಪೂರ್ವ ಭತ್ತದ ತಳಿಗಳ ಸಂಗ್ರಾಹಕ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರನ್ನು ಗೌರವಿಸಲಾಯಿತು. ಡಾ.ಕೆ.ಮುರಳೀಧರನ್ ಹರಿಜಾಲ್ ಸ್ವಾಗತಿಸಿದರು. ಲೋಕೇಶ್ ಆಚಾರ್ಯ ನಿರೂಪಿಸಿದರು. ಸುರೇಶ್ ಕಾನತ್ತೂರು ವಂದಿಸಿದರು. ದೇವಾಲಯದ ಎದುರು ಭಾಗದ ಬಯಲಲ್ಲಿ ಸುಸಜ್ಜಿತ ನಕ್ಷತ್ರವನ ನಿರ್ಮಾಣಕ್ಕಾಗಿ ಸ್ವಾಮಿ ಬ್ರಹ್ಮಸ್ವರೂಪಾನಂದಪುರಿ ಹಾಗೂ ಲಕ್ಷ್ಮೀನಾರಾಯಣ ಪಟ್ಟೇರಿ ಕಾವುಮಠ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಲಕ್ಷ್ಮೀನಾರಾಯಣ ಪಟ್ಟೇರಿ ಕಾವುಮಠ, ಕೆ.ಶಶಿಧರ್ ಐಎಎಸ್, ವಲಯ ಅರಣ್ಯಾಧಿಕಾರಿ ಕೆ.ಗಿರೀಶ್, ಮಧುಸೂದನ್ ಅಯಾರ್ ಮಂಗಳೂರು, ಸುರೇಶ್ ವೈದ್ಯರ್ ಪಯ್ಯನ್ನೂರು, ಬಾಬು ವೈದ್ಯರ್ ಎರ್ನಾಕುಳಂ ಉಪಸ್ಥಿತರಿದ್ದರು.