ಗ್ಯಾರಂಟಿ ಯೋಜನೆ ಗ್ರಾಮೀಣ ಮಟ್ಟಕ್ಕೂ ತಲುಪಿಸಿ: ಧರ್ಮಜ ಉತ್ತಪ್ಪ

mela
Published on

ಮಡಿಕೇರಿ: ರಾಜ್ಯ ಸರ್ಕಾರದ ಎರಡು ವರ್ಷಗಳ ಅಭಿವೃದ್ಧಿ ಸಾಧನೆ ಹಾಗೂ ಪಂಚ ಗ್ಯಾರಂಟಿ ಯೋಜನೆ ಬಿಂಬಿಸುವ ಮಾಹಿತಿ ಒಳಗೊಂಡ ವಸ್ತು ಪ್ರದರ್ಶನಕ್ಕೆ ಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಮತ್ತು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಭಾನುವಾರ ಚಾಲನೆ ನೀಡಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತ ಮಾಹಿತಿಯುಳ್ಳ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.

ವಸ್ತು ಪ್ರದರ್ಶನ ಮಳಿಗೆಯಲ್ಲಿ ಅಳವಡಿಸಲಾದ ಗ್ಯಾರಂಟಿ ಸಮರ್ಪಣೆ ಅಭಿವೃದ್ಧಿಯ ಸಂಕಲ್ಪ, ನಾಡಿನ ಏಳು ಕೋಟಿ ಜನರ ಬೆಳಕು ಗ್ಯಾರಂಟಿ ಬದುಕು ಫಲಕ, ಸರ್ಕಾರದ ಯೋಜನೆಗಳಾದ ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಪ್ರಯಾಣಿಸಲು ಶಕ್ತಿ ಯೋಜನೆ, ಬಡ, ಹಿಂದುಳಿದ ಸೇರಿದಂತೆ ಎಲ್ಲ ಮಹಿಳೆಯರು ಸ್ವಾವಲಂಬಿ ಬದುಕು ನಡೆಸಲು ಎಲ್ಲ ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು ರೂ. ಎರಡು ಸಾವಿರ ಹಣ ನೀಡುವ ಗೃಹಲಕ್ಷ್ಮಿ ಯೋಜನೆ, ಜತೆಗೆ ಅನ್ನಭಾಗ್ಯ, ಪದವಿ, ಡಿಪ್ಲೊಮಾ ಪೂರ್ಣಗೊಳಿಸಿದ ಯುವ ಜನತೆಗೆ ಉದ್ಯೋಗ ಪಡೆಯಲು ಅನುಕೂಲವಾಗಲು ಪ್ರತಿ ತಿಂಗಳು ಪದವೀಧರರಿಗೆ ರೂ.ಮೂರು ಸಾವಿರ ಹಾಗೂ ಡಿಪ್ಲೊಮೊ ಪದವಿದರರಿಗೆ ರೂ.೧೫೦೦ ನೀಡುವ ಯುವನಿಧಿ, ಪ್ರತಿ ಮನೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗಳು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಜಾರಿಗೊಂಡಿದ್ದು, ಜನಸಾಮಾನ್ಯರ ಬದುಕಿಗೆ ಆಸರೆಯಾಗಿರುವ ಪಂಚ ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಕಾರ್ಯಕ್ರಮ ಒಳಗೊಂಡ ಸಮಗ್ರ ಮಾಹಿತಿಯುಳ್ಳ ಫಲಕಗಳನ್ನು ಗಣ್ಯರು ವೀಕ್ಷಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರಗಳನ್ನು ಒಳಗೊಂಡ ಸೆಲ್ಫಿ ಪಾಯಿಂಟ್‌ಗಳನ್ನು ವೀಕ್ಷಿಸಿ ಪ್ರಶಂಸಿದ ಗ್ಯಾರಂಟಿ ಯೋಜನೆ ಅನುಷ್ಠಾನ ಜಿಲ್ಲಾ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಗ್ಯಾರಂಟಿ ಯೋಜನೆ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರಿರ ಮೋಹನ್ ದಾಸ್ ಅವರು ಸೆಲ್ಫಿ ಪಾಯಿಂಟ್‌ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು.

ಬಳಿಕ ಮಾತನಾಡಿದ ತೀತೀರ ಧರ್ಮಜ ಉತ್ತಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮ ಜಾರಿಗೊಳಿಸಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ಮಟ್ಟಕ್ಕೂ ಈ ಯೋಜನೆಯ ಮಾಹಿತಿ ದೊರೆಯುವಂತಾಗಬೇಕು ಎಂದರು.

ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸೇರಿದಂತೆ ಸರ್ಕಾರ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಕಲ್ಯಾಣ ಕಾರ್ಯಕ್ರಮವನ್ನು ಶ್ರೀ ಸಾಮಾನ್ಯರಿಗೆ ತಲುಪಿಸಲು ಶ್ರಮಿಸಿದೆ. ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ಒಳಗೊಂಡ ಚಿತ್ರಣ ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಸರ್ಕಾರದ ಸಾಧನೆ ಒಳಗೊಂಡ ಮಾಹಿತಿ ವಸ್ತು ಪ್ರದರ್ಶನ ಗಮನ ಸೆಳೆಯುತ್ತದೆ ಎಂದು ಧರ್ಮಜ ಉತ್ತಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿವಿಧ ಗಣ್ಯರು ಕೂಡ ಸೆಲ್ಫಿಪಾಯಿಂಟ್‌ನಲ್ಲಿ ಫೋಟೊ ತೆಗೆಸಿಕೊಂಡು ಸಂತಸ ವ್ಯಕ್ತಪಡಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ ಹಾಗೂ ಯೋಜನೆಗಳನ್ನು ಬಿಂಬಿಸುವ ಮಾಹಿತಿ ಒಳಗೊಂಡ ವಸ್ತು ಪ್ರದರ್ಶನವನ್ನು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದೆ. ಜು.೮ ರವರೆಗೆ ವಸ್ತು ಪ್ರದರ್ಶನವು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ. ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳ ಲಾಭ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ದೊರಕಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ಒಳಗೊಂಡಂತೆ ಸರ್ಕಾರದ ಜನಪರ ಯೋಜನೆಗಳ, ಅಭಿವೃದ್ಧಿ ಸಾಧನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿಲು ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಮಾಹಿತಿ ನೀಡಿದರು.

ರಾಜ್ಯ ಸರ್ಕಾರದ ಎರಡು ವರ್ಷದ ಸಾಧನೆ ಹಾಗೂ ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ. ಈ ವಸ್ತು ಪ್ರದರ್ಶನದಲ್ಲಿ ನಾಡಿನ ಜನರ ಬದುಕು ಬೆಳಗಿಸಿದ ಗ್ಯಾರಂಟಿ ಯೋಜನೆಗಳ ಸಮಗ್ರ ಮಾಹಿತಿ, ಯಶೋಗಾಥೆ ಒಳಗೊಂಡ ಪುಸ್ತಕವನ್ನು ರಾಜ್ಯದ ಮುಖ್ಯಮಂತ್ರಿ ಅವರಿಂದ ಪಡೆಯುವಂತೆ ಬಿಂಬಿಸುವ ಸೆಲ್ಪಿ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಸಹಾಯಕ ಸಂಚಾರ ಅಧೀಕ್ಷರ ಎ.ಈರಸಪ್ಪ, ಸಂಚಾರ ನಿಯಂತ್ರಕ ಮಲ್ಲಿಕಾರ್ಜುನ, ನಾಯಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net