ಬಿಸಿಐಸಿ ಯೋಜನೆಯನ್ನು ಮಂಗಳೂರುವರೆಗೆ ವಿಸ್ತರಿಸಿ

ಬಿಸಿಐಸಿ ಯೋಜನೆಯನ್ನು ಮಂಗಳೂರುವರೆಗೆ ವಿಸ್ತರಿಸಿ
Published on

ಹಾಸನ: ಬೆಂಗಳೂರು-ಚೆನೈ ಇಂಡಸ್ಟ್ರೀಯಲ್ ಕಾರಿಡಾರ್ (ಬಿಸಿಐಸಿ) ಯೋಜನೆಯನ್ನು ಮಂಗಳೂರುವರೆಗೆ ವಿಸ್ತರಿಸುವ ಮೂಲಕ ಆರ್ಥಿಕ ಹಾಗೂ ಔದ್ಯೋಗಿಕವಾಗಿ ಸಮಗ್ರ ಅಭಿವೃದ್ಧಿಗೆ ಸಹಕರಿಸಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಆಗ್ರಹಿಸಿದರು.

ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಂಧ್ರ ಪ್ರದೇಶದ ಕೃಷ್ಣಪಟ್ಟಣಂ ಮತ್ತು ತಮಿಳುನಾಡಿನ ಪೊನ್ನೇರಿ ಸೇರಿ ಕೆಲವು ಕೈಗಾರಿಕಾ ನೋಡ್‌ಗಳನ್ನು ಯೋಜನೆ ಒಳಗೊಂಡಿದೆ. ಚೆನೈ-ಬೆಂಗಳೂರು ಮಾರ್ಗದಲ್ಲಿ ಈಗಾಗಲೇ ಕಾಮಗಾರಿಯು ಆರಂಭವಾಗಿದೆ. ಅದನ್ನು ಮಂಗಳೂರು ವರೆಗೆ ವಿಸ್ತರಿಸಿದರೆ ಹಾಸನ ಸೇರಿ ಇತರ ಜಿಲ್ಲೆಗಳು ಅಭಿವೃದ್ಧಿ ಹೊಂದುತ್ತವೆ. ಈ ವಿಚಾರದಲ್ಲಿ ರಾಜಕೀಯ ಮಾಡದೆ ರಾಜ್ಯ ಸರ್ಕಾರ ಮನಸ್ಸು ಮಾಡಬೇಕು. ರಾಜ್ಯ ಸರ್ಕಾರ ಪ್ರಯತ್ನ ಹಾಕಿದರೆ ಮುಂದಿನ ವರ್ಷದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಮಂಡಿಸಬಹುದು. ಕೇಂದ್ರ ಮಟ್ಟದಲ್ಲಿ ನಾನು ಸಹ ಸಾಧ್ಯವಾದ ಪ್ರಯತ್ನ ಮಾಡುತ್ತೆನೆಂದು ಭರವಸೆ ನೀಡಿದರು.

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: 93ನೇ ಇಳಿವಯಸ್ಸಿನಲ್ಲಿರುವ ನಾನು ರಾಜಕೀಯ ಕಾರಣಕ್ಕಾಗಿ ಮಾತನಾಡುವುದಿಲ್ಲ. 65 ವರ್ಷಗಳ ರಾಜಕೀಯ ಜೀವನದಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇನೆ. ಈ ವಿಚಾರದಲ್ಲಿ ಟೀಕೆ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಒಟ್ಟಿಗೆ ಕೆಲಸ ಮಾಡಿದ್ದೇವೆ, ಈಗ ಬೇರೆ ಪಕ್ಷದಲ್ಲಿದ್ದೇವೆ. ಚುನಾವಣೆ ಬಂದಾಗ ರಾಜಕಾರಣ ಮಾಡಿದರಾಯಿತು. ಹಿಂದೆ ಏನೇನು ನಡೆಯಿತು ಎಂಬುದರ ಪರಾಮರ್ಶೆ ಈಗ ಬೇಡ. ಕೈಗಾರಿಕಾ ಕಾರಿಡಾರ್ ವಿಸ್ತರಣೆಯಾದರೆ ಜಿಲ್ಲೆಗೆ ಅನುಕೂಲವಾಗುತ್ತದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಹಾಸನ ತುಂಬಾ ಹಿಂದುಳಿದಿದೆ. ಬೇರೆ ಎಲ್ಲಾ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳಿವೆ. ಆದರೆ ಹಾಸನದಲ್ಲಿ ಇನ್ನೂ ಆಗಿಲ್ಲ. ಆದ್ದರಿಂದ ಜಿಲ್ಲೆಯ ಜನರ ಒಳಿತಿಗಾಗಿ ನಾನು ಹೋರಾಡುತ್ತೆ?ನೆಂದರು.

ಯಾವಾಗಲೂ ಮಳೆ ಆಗುವುದಿಲ್ಲ: ಈ ಬಾರಿ ಉತ್ತಮ ಮಳೆಯಾಗಿ ಜಲಾಶಯಗಳೆಲ್ಲ ಭರ್ತಿಯಾಗಿವೆ. ಭವಿಷ್ಯದ ದಿನಗಳು ಹೀಗೆ ಇರುತ್ತವೆಂದು ಹೇಳಲು ಆಗುವುದಿಲ್ಲ. ಮಹದಾಯಿ ಯೋಜನೆಗಾಗಿ ರಾಜ್ಯ ಸರ್ಕಾರ ಇತ್ತೀಚೆಗೆ ಉನ್ನತ ಮಟ್ಟದ ಸಭೆ ಬಹಿಷ್ಕರಿಸಿದ್ದನ್ನು ನಾನು ಸ್ವಾಗತಿಸುತ್ತೇನೆ. ರಾಜ್ಯದ ಕಾವೇರಿ ಹಾಗೂ ಮಹದಾಯಿ ಅಚ್ಚುಕಟ್ಟು ಪ್ರದೇಶದ ಕೃಷಿ ಉಳಿಸಿಕೊಳ್ಳಬೇಕೆಂದರೆ ನೀರಿನ ಲಭ್ಯತೆ ಹೆಚ್ಚಿರಬೇಕು. ಯಾವಾಗಲೂ ಮಳೆಯಾಗುವುದಿಲ್ಲವಾದ್ದರಿಂದ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಕಾವೇರಿ ಕೊಳ್ಳದ ಜನರಿಗೆ ಅನುಕೂಲವಾಗುವ ತೀರ್ಮಾನ ಕೈಗೊಳ್ಳಬೇಕು. ಜನಸಂಖ್ಯೆ ಹೆಚ್ಚಾದ್ದರಿಂದ ಬೆಂಗಳೂರನ್ನು 5 ಭಾಗವಾಗಿಸಿದ್ದಾರೆ. ಪ್ರಸ್ತುತ ವಾರ್ಷಿಕ 30 ಟಿಎಂಸಿ ನೀರು ರಾಜಧಾನಿಗೆ ಬೇಕಾಗುತ್ತದೆ. ಕೆಲವೇ ವರ್ಷಗಳಲ್ಲಿ 50 ಟಿಎಂಸಿ ನೀರಿಗೆ ಬೇಡಿಕೆ ಬರುತ್ತದೆ. ಆದ್ದರಿಂದ ಕಾವೇರಿ ನೀರನ್ನು ಉಳಿಸಿಕೊಳ್ಳುವ ಕೆಲಸವಾಗಬೇಕೆಂದರು.

ಬೆಂಗಳೂರಿನ ಕೊಳಚೆ ನೀರನ್ನು ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಯ ಕೆರೆಗೆ ಹರಿಸಲಾಗುತ್ತಿದ್ದು ಅದರಿಂದ ಅಲ್ಲಿನ ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದೆ. ಈ ಸಂಬಂಧ ವರದಿಯನ್ನು ತರಿಸಿಕೊಂಡಿದ್ದು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೆ?ನೆಂದರು.

ಪಶ್ಚಿಮ ಘಟ್ಟದಲ್ಲಿ ಸುರಂಗ ಆಗಲಿ: ಶಿರಾಡಿ ಘಾಟ್‌ನಲ್ಲಿ ನಿರಂತರ ಮಳೆಯಿಂದ ಭೂಕುಸಿದ ಸಂಭವಿಸಿ ಪ್ರತಿವರ್ಷ ವಾಹನಗಳ ಸಂಚಾರಕ್ಕೆ ಧಕ್ಕೆಯಾಗುತ್ತಿದೆ. ಆಸ್ಕರ್ ಫನಾರ್ಂಡಿಸ್ ಅವರು ಸುರಂಗ ನಿರ್ಮಾಣದ ಪ್ರಸ್ತಾಪ ಕೈಗೆತ್ತಿಕೊಂಡಿದ್ದರು. ಆದರೆ ಅದರಿಂದ ಪರಿಸರಕ್ಕೆ ಧಕ್ಕೆಯಾಗುತ್ತದೆಂದು ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ. ಸುರಂಗ ನಿರ್ಮಾಣವಾದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಅದರ ಮೇಲೆ ಮರಗಿಡಗಳನ್ನು ಬೆಳೆಯಬಹುದು. ಆದಷ್ಟು ಬೇಗ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆಂದರು.

ರಾಜಕೀಯ ನಿವೃತ್ತಿ ಪಡೆಯೋದಿಲ್ಲ: ಇನ್ನು 11 ತಿಂಗಳು ಕಳೆದರೆ ನನ್ನ ರಾಜ್ಯಸಭಾ ಅಧಿಕಾರಾವಧಿ ಮುಗಿಯುತ್ತದೆ. ಹಾಗಂತ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಿಲ್ಲ. ಅಧಿಕಾರ ಇಲ್ಲದಿದ್ದರೂ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಜಿಲ್ಲೆಯ ಅಭಿವೃದ್ಧಿಗಾಗಿ ವೀಲ್‌ಚೇರ್‌ನಲ್ಲೇ ಪಾರ್ಲಿಮೆಂಟ್ ವರೆಗೆ ಹೋಗುವ ಶಕ್ತಿ ನನಗಿದೆ ಎಂದರು.

ನಾನು ರಾಜ್ಯಸಭೆ ಸದಸ್ಯ ಸ್ಥಾನದಿಂದ ನಿರ್ಗಮಿಸಿದರೂ ಪ್ರಧಾನಿ ನರೇಂದ್ರ ಮೋದಿ ತಮ ಅವಧಿ ಪೂರ್ಣಗೊಳಿಸುತ್ತಾರೆ. ಅದರಲ್ಲಿ ಯಾವ ಸಂದೇಹ ಬೇಡ. ಮೋದಿ ಮತ್ತು ನನ್ನ ಸಂಬಂಧ ಮೈತ್ರಿ ಬಳಿಕ ಆದದ್ದಲ್ಲ. ಕಳೆದ 10 ವರ್ಷಗಳಿಂದ ಅವರು ನಾವು ಅನ್ಯೊ?ನ್ಯತೆಯಿಂದ ಇದ್ದೇವೆ. ಅಭಿವೃದ್ಧಿಗೆ ಮೋದಿ ಅವರು ಸಕಾರಾತಕವಾಗಿ ಸ್ಪಂದಿಸುತ್ತಾರೆಂದರು.

ಶಾಸಕ ಸ್ವರೂಪ್ ಪ್ರಕಾಶ್, ಎಚ್.ಕೆ.ಕುಮಾರಸ್ವಾಮಿ, ಲಿಂಗೇಶ್ ಇತರರಿದ್ದರು.

===

14ಎಚ್‌ಎಸ್‌ಎನ್ 1: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಸಕ ಸ್ವರೂಪ್ ಪ್ರಕಾಶ್, ಲಿಂಗೇಶ್, ಎಚ್.ಕೆ.ಕುಮಾರಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net