ನಿರುದ್ಯೋಗಿಗಳೆಗೆಲ್ಲ ಭತ್ಯೆ ವಿಸ್ತರಿಸಿ

Extend allowance to all unemployed
ಎಐಡಿವೈಒ 58ನೇ ಸಂಸ್ಥಾಪನ ದಿನದ ಹಿನ್ನೆಲೆ ರಾಜ್ಯ ಸಮಿತಿ ಸದಸ್ಯರು ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಯುವ ಜನರ ಹಲವು ಬೇಡಿಕೆಗಳ ಬಗ್ಗೆ ಮನವಿ ಅರ್ಪಿಸಿದರು. ಅಖಿಲ ಭಾರತ ಉಪಾಧ್ಯಕ್ಷ ಡಾ. ಜಿ. ಶಶಿಕುಮಾರ್, ಅಧ್ಯಕ್ಷ ಶರಣಪ್ಪ ಉದ್ಬಾಳ್, ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಉಪಾಧ್ಯಕ್ಷ ಕೃಷ್ಣ ಇತರರಿದ್ದರು.
Published on

ವಿಜಯಪುರ: ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂಥ್ ಆರ್ಗನೈಜೇಶನ್ ರಾಜ್ಯ ಸಮಿತಿ ಸದಸ್ಯರು ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಯುವ ಜನರ ಹಲವು ಬೇಡಿಕೆಗಳ ಬಗ್ಗೆ ಮನವಿ ಅರ್ಪಿಸಿದರು.

58ನೇ ಸಂಸ್ಥಾಪನಾ ದಿನದ ಹಿನ್ನೆಲೆ ಸಂಘಟನೆಯ ಅಖಿಲ ಭಾರತ ಉಪಾಧ್ಯಕ್ಷ ಡಾ. ಜಿ. ಶಶಿಕುಮಾರ್ ನೇತೃತ್ವದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ, ರಾಜ್ಯ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳಲ್ಲಿ ಒಂದಾದ ‘ನಿರುದ್ಯೋಗ ಭತ್ಯೆ’ ಯೋಜನೆಯನ್ನು ಹಲವು ವರ್ಷಗಳಿಂದ ನಿರುದ್ಯೋಗದಿಂದ ಬಳಲುತ್ತಿರುವ ರಾಜ್ಯದ ಎಲ್ಲಾ ನಿರುದ್ಯೋಗಿಗಳಿಗೂ ವಿಸ್ತರಿಸಲು ಆಗ್ರಹಿಸಿದರು.

ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಐದು ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಒಂದು ಸಾವಿರ ರೂ. ಅರ್ಜಿ ಶುಲ್ಕ ನಿಗದಿ ಮಾಡಿದ್ದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತಲ್ಲದೇ ಅದನ್ನು ಹಿಂಪಡೆಯುವಂತೆ ಮನವಿ ಮಾಡಲಾಯಿತು. ಜೊತೆಗೆ ನೇಮಕಾತಿಗಾಗಿ ನಡೆಯುವ ಪ್ರವೇಶ ಪರೀಕ್ಷೆ ಬರೆಯಲು ಹೋಗುವ ನಿರುದ್ಯೋಗಿ ಯುವಕರಿಗೆ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಡಿ ಎಂದೂ ಬೇಡಿಕೆ ಸಲ್ಲಿಸಲಾಯಿತು.

ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ನೇಮಕಾತಿಯಲ್ಲಿನ ಭ್ರಷ್ಟಾಚಾರ ತಡೆಯಬೇಕು, ಯುವಜನರನ್ನು ದಾರಿ ತಪ್ಪಿಸುವ ವಿಚ್ಛಿದ್ರಕಾರಿ ಶಕ್ತಿಗಳನ್ನು ಮಟ್ಟಹಾಕಬೇಕು, ದ್ವೇಷದ ರಾಜಕಾರಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ನೇಮಕಾತಿಗಾಗಿನ ಎಲ್ಲಾ ತರಹದ ಅರ್ಜಿ ಶುಲ್ಕಗಳನ್ನು ಕೈಬಿಡಬೇಕು, ಯುವ ಜನತೆಯ ಸಾಂಸ್ಕೃತಿಕ ಅಧಃಪತನಕ್ಕೆ ಕಾರಣವಾದ ಮಾಧ್ಯಮಗಳಲ್ಲಿನ ಅಶ್ಲೀಲತೆ, ಮದ್ಯ ಮಾದಕ ವಸ್ತುಗಳಿಗೆ ಕಡಿವಾಣ ಹಾಕಬೇಕು ಎಂಬ ಹತ್ತು ಬೇಡಿಕೆಗಳ ಅಗ್ರಹ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನಿಯೋಗದೊಂದಿಗೆ ಚರ್ಚೆ ನಡೆಸಿದ ಮುಖ್ಯಮಂತ್ರಿಗಳು, ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ನಿಯೋಗದಲ್ಲಿ ಎಐಡಿವೈಒ ಅಧ್ಯಕ್ಷ ಶರಣಪ್ಪ ಉದ್ಬಾಳ್, ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ಉಪಾಧ್ಯಕ್ಷರಾದ ಕೃಷ್ಣ, ಖಜಾಂಚಿ ಜಯಣ್ಣ, ಸಮಿತಿ ಸದಸ್ಯರಾದ ರಾಜಶೇಖರ, ಪೂರ್ಣಿಮ ಹಾಗೂ ಸದಸ್ಯರಾದ ಅರುಣಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net