ಪ್ರತಾಪಸಿಂಹರನ್ನು ಕಾರ್ಯಕ್ರಮದಿಂದ ಬಹಿಷ್ಕರಿಸಿದ್ದು ಖಂಡನೀಯ, ಪ್ರಕರಣಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಒಕ್ಕಲಿಗರ ಸಂಘದಿಂದ ಒತ್ತಾಯ

Prathap Simha
Published on

ಮೈಸೂರು: ತಾಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಶ್ರೀರಾಮಮಂದಿರ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂಸದ ಪ್ರತಾಪಸಿಂಹ ಅವರಿಗೆ ಕೆಲವರು ಘೇರಾವ್ ಹಾಕಿ, ಕಾರ್ಯಕ್ರಮದಿಂದ ಬಹಿಷ್ಕರಿಸಿದ್ದು ಖಂಡನೀಯ. ಪ್ರಕರಣಕ್ಕೆ ಕಾರಣರಾದವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕಾನೂನು ರೀತಿ ಹೋರಾಟ ನಡೆಸಲಾಗುತ್ತದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಪಿ.ಪ್ರಶಾಂತ್‌ಗೌಡ ಒತ್ತಾಯಿಸಿದರು.

ಶಿಲೆ ಸಿಕ್ಕಿರುವ ರಾಮದಾಸ್ ಎಂಬುವರ ಜಮೀನಿನಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಅಂದು ಭೂಮಿಪೂಜೆ ನಿಗದಿಯಾಗಿತ್ತು. ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜಮೀನಿನ ಮಾಲೀಕರ ಪುತ್ರರೇ ಪ್ರತಾಪಸಿಂಹ ಅವರಿಗೂ ಆಹ್ವಾನ ನೀಡಿದ್ದರು. ಹೀಗಿದ್ದರೂ ಕೆಲವರು ರಾಜಕೀಯ ಕಾರಣಕ್ಕಾಗಿ ಪ್ರತಾಪಸಿಂಹ ಅವರನ್ನು ಅಪಮಾನಿಸಿದ್ದಾರೆ. ಕಾರ್ಯಕ್ರಮದಿಂದ ಬಹಿಷ್ಕರಿಸಿದ್ದಾರೆ. ಇದೇನೇ ಇದ್ದರೂ ರಾಜ್ಯ ಹಾಗೂ ಜಿಲ್ಲಾ ಒಕ್ಕಲಿಗರ ಸಂಘಗಳು ಸಂಸದ ಪ್ರತಾಪಸಿಂಹ ಪರ ನಿಲ್ಲಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸದರಿ ಪ್ರಕರಣ ಇಡೀ ಸಮಾಜಕ್ಕೆ ಅಪಮಾನವಾಗಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಜನರನ್ನು ತಲೆ ತಗ್ಗಿಸುವಂತೆ ಮಾಡಿದೆ. ಪ್ರತಿಯೊಬ್ಬರು ಸಾಮಾಜಿಕ ಬಹಿಷ್ಕಾರವನ್ನು ವಿರೋಧಿಸುತ್ತಾರೆ. ಆದರೆ, ಇಲ್ಲಿ ಒಬ್ಬ ಸಂಸದನನ್ನು ಬಹಿಷ್ಕರಿಸುವ ಮೂಲಕ ಜಾತಿ ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಬಹಿಷ್ಕಾರದ ವಿರುದ್ಧ ಮಾತನಾಡುವವರು ಇದಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಸಂಸದ ಪ್ರತಾಪಸಿಂಹ ಎಂದೂ ಮಹಿಷ ದಸರಾ ಆಚರಿಸಬೇಡಿ ಎಂದು ಹೇಳಿಲ್ಲ. ವಿರೋಧವನ್ನು ಮಾಡಿಲ್ಲ. ಬದಲಿಗೆ ಚಾಮುಂಡಿಬೆಟ್ಟದಲ್ಲಿ ಆಚರಿಸಬೇಡಿ. ಬೇರೆ ಸ್ಥಳದಲ್ಲಿ ಆಚರಣೆ ಮಾಡಿ ಎಂದು ಮಾತ್ರ ಹೇಳಿದ್ದಾರೆ. ಆದರೆ, ಕೆಲವರು ಅವರನ್ನು ಒಂದು ಸಮುದಾಯ ವಿರುದ್ಧ ಇದ್ದಾರೆ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಇರುವ ಪಕ್ಷದಲ್ಲೂ ಎಲ್ಲ ವರ್ಗದ ನಾಯಕರಿದ್ದಾರೆ ಎನ್ನುವುದನ್ನು ತಿಳಿಯಬೇಕು ಎಂದರು.

ಇನ್ನು ಮುಂದೆ ಸಂಸದರ ವಿರುದ್ಧ ಇಂತಹ ಪ್ರಕರಣಗಳಿಗೆ ಅವಕಾಶ ನೀಡಬಾರದು. ಎಲ್ಲ ಸಮುದಾಯದವರೂ ಸಹೋದರರ ರೀತಿ ಮುನ್ನಡೆಯೋಣ ಎಂದರು.

ನಿರ್ದೇಶಕ ಎಂ.ಕೆ.ಮಿರ್ಲೇ ಶ್ರೀನಿವಾಸ್ ಗೌಡ ಮಾತನಾಡಿ, ಸಂಸದನ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸುವ ದೃಷ್ಟಿಯಿಂದ ಇಷ್ಟೆಲ್ಲಾ ನಡೆದರೂ ಸ್ಥಳದಲ್ಲಿದ್ದ ಪೊಲೀಸರು ಮತ್ತು ಅಧಿಕಾರಿಗಳು ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದ ಅವರು, ಪ್ರಕರಣಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗುತ್ತದೆ. ಒಂದು ವೇಳೆ ಅವರು ಕ್ರಮ ಕೈಗೊಳ್ಳದಿದ್ದರೆ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಸಿ.ಮರಿಸ್ವಾಮಿ ಮಾತನಾಡಿ, ಮಹಿಷ ದಸರಾಕ್ಕೂ ಹಾರೋಹಳ್ಳಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೂ ಸಂಬಂಧವೇ ಇಲ್ಲ. ಕೇವಲ ಜಾತಿ ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸಲು ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದರು.

ಸಂಘದ ಪದಾಧಿಕಾರಿಗಳಾದ ಚೇತನ್, ಎ.ರವಿ, ಗುರುರಾಜ್, ಬಿ.ಇ.ಗಿರೀಶ್‌ಗೌಡ, ಬೋರೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net