

ಬೆಂಗಳೂರು: ನಗರದ ಪ್ರತಿಷ್ಠಿತ ಎಚ್‌ಎಸ್‌ಆರ್ ಬಡಾವಣೆಗೆ ಸೇರಿದ ಕೋಟ್ಯಂತರ ರೂ. ಮೌಲ್ಯದ 10 ಎಕರೆ ಜಮೀನನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳು ನೆಲಗಳ್ಳರೊಂದಿಗೆ ಸೇರಿ ಪರಭಾರೆ ಮಾಡಿದ್ದು, ಅಷ್ಟೂ ಜಾಗವನ್ನು ವಶಕ್ಕೆ ಪಡೆದುಕೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಬಿಡಿಎ ಆಯುಕ್ತ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ಆಗ್ರಹಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿಗೆ ಸೇರಿ ಅಗರ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು 35.05 ಎಕರೆ ಜಮೀನಿಗೆ ಸಂಬಂಧಿಸಿ 1986-87ರಲ್ಲಿ ಬಿಡಿಎ ಭೂಸ್ವಾಧೀನ ಪಡಿಸಿಕೊಂಡು ಮರುವರ್ಷವೇ ಭೂಮಾಲೀಕರಿಗೆ ಪರಿಹಾರಧನ ಬಿಡುಗಡೆ ಮಾಡಿ ಜಮೀನನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಈ ಪೈಕಿ ಸರ್ವೆ ನಂ.75ರ 4 ಎಕರೆ 26 ಗುಂಟೆ, ಸರ್ವೆ ನಂ.76/1ರ 4 ಎಕರೆ 31 ಗುಂಟೆ, ಸರ್ವೆ ನಂ.76/2ರ 5 ಗುಂಟೆ ಸ್ವತ್ತು ಎಚ್‌ಎಸ್‌ಆರ್ ಬಡಾವಣೆ ಪೋಲೀಸ್ ಠಾಣೆಗೆ ಹೊಂದಿಕೊಂಡಿದ್ದು, ಈ ಸ್ವತ್ತಿನಲ್ಲಿರುವ ಒಂದು ನಿವೇಶನವನ್ನು ಇತ್ತೀಚೆಗೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಚದರಡಿ ಒಂದಕ್ಕೆ 91 ಸಾವಿರ ರೂ. ಮೊತ್ತ ನಮೂದಿಸಿ ನೋಂದಣಿ ಮಾಡಲಾಗಿದೆ ಎಂದು ಅವರು ದೂರು ನೀಡಿದ್ದಾರೆ.
ಪ್ರಸ್ತುತ ಸದರಿ ಸ್ವತ್ತಿನ ಪ್ರತಿ ಚದರ ಅಡಿಯ ಮಾರುಕಟ್ಟೆ ಬೆಲೆಯು ಸುಮಾರು 70 ಸಾವಿರ ರೂ. ಗೂ ಹೆಚ್ಚು ಮೌಲ್ಯವಿದೆ. ಈ ಸ್ವತ್ತನ್ನು ಮೂವರು ನೆಲಗಳ್ಳರು ಬಿಡಿಎನ ಭ್ರಷ್ಟ ಅಧಿಕಾರಿಗಳೊಂದಿಗೆ ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಪ್ರಾಧಿಕಾರದಿಂದ ಪರಿಹಾದಧನ ಪಡೆದುಕೊಂಡಿರುವ ಆಯಾ ಸ್ವತ್ತುಗಳ ಮೂಲ ಮಾಲೀಕರಿಂದ ಹಿಂದಿನ ದಿನಾಂಕಗಳನ್ನು ಜಿಪಿಎ ಹಾಗೂ ಕರಾರು ಪತ್ರ ಮಾಡಿಸಿಕೊಂಡು ರಾಜಕೀಯ ಪ್ರಭಾವ ಬಳಸಿ ಸ್ವತ್ತುಗಳನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡು ಮಾರಾಟ ಮಾಡಿದ್ದಾರೆ. ಇದರಿಂದಾಗಿ ಕೋಟ್ಯಂತರ ರೂ. ಮೌಲ್ಯದ ಬಿಡಿಎನ 10 ಎಕರೆಗೂ ಅಧಿಕ ಜಮೀನು ಕೈತಪ್ಪಿದೆ. ಆದರೂ, ಪ್ರಾಧಿಕಾರ ಅಥವಾ ಸರ್ಕಾರವು ವಂಚಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ನ್ಯಾಯಾಂಗ ತನಿಖೆಗೆ ಒತ್ತಾಯ:
ಕೈತಪ್ಪಿರುವ ಸ್ವತ್ತುಗಳನ್ನು ಕೂಡಲೇ ವಶಕ್ಕೆ ಪಡೆದುಕೊಳ್ಳಬೇಕು ಹಾಗೂ ಸಂಸ್ಥೆಗೆ ನಷ್ಟ ಉಂಟು ಮಾಡಿರುವ ಬಿಡಿಎ ಪೂರ್ವ ವಿಭಾಗದ ಎಇ, ಎಇಇ, ಕಂದಾಯ ಹಾಗೂ ಭೂಸ್ವಾಧೀನ ವಿಭಾಗದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಜತೆಗೆ ಸರ್ಕಾರಕ್ಕೆ ಪತ್ರ ಬರೆದು ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ಸಂಬಂಧಪಟ್ಟ ದಾಖಲೆಗಳ ಸಹಿತ ಬಿಡಿಎ ಆಯುಕ್ತರನ್ನು ಆಗ್ರಹಿಸಲಾಗಿದೆ. ಜತೆಗೆ ತಪ್ಪಿತಸ್ಥ ಬಿಡಿಎ ಅಧಿಕಾರಿಗಳ ವಿರುದ್ಧ ಸರ್ಕಾರಿ ಭೂ ಕಬಳಿಕೆ, ವಂಚನೆ, ಭ್ರಷ್ಟಾಚಾರ ಮತ್ತು ಅತಿಕ್ರಮ ಪ್ರವೇಶ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಲೋಕಾಯುಕ್ತರಿಗೂ ದಾಖಲೆ ಸಹಿತ ದೂರು ಸಲ್ಲಿಸಲಾಗಿದೆ ಎಂದು ಎನ್. ಆರ್.ರಮೇಶ್ ತಿಳಿಸಿದ್ದಾರೆ.