

ತುಮಕೂರು: ವಿವಾದಿತ ಹೇಮಾವತಿ ಎಕ್ಸಪ್ರೆಸ್ ಲಿಂಕ್ ಕೆನಾಲ್ ಫೀಡರ್ ಯೋಜನೆ ತಾಂತ್ರಿಕ ಅಂಶಗಳ ಕುರಿತು ಚರ್ಚಿಸಲು ಹಾಗೂ ಹೋರಾಟದಲ್ಲಿ ಭಾಗಿಯಾದ ರೈತರು, ಮಠಾಧೀಶರ ಮೇಲಿನ ದೌರ್ಜನ್ಯ ನಿವಾರಣೆಗೊಳಿಸುವ ಹಿನ್ನೆಲೆಯಲ್ಲಿ ಯೋಜನೆ ವ್ಯಾಪ್ತಿಗೆ ಬರುವ ಎಲ್ಲ ಜನಪ್ರತಿನಿಧಿಗಳ ಸಭೆ ಕರೆಯುವಂತೆ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸೋಮವಾರ ಪತ್ರ ಬರೆದು ಒತ್ತಾಯಿಸಿದ್ದಾರೆ.
ಲಿಂಕ್ ಕೆನಾಲ್ನಿಂದ ತುಮಕೂರು ಭಾಗದ ರೈತರಿಗಾಗುವ ಅನ್ಯಾಯದ ಬಗ್ಗೆ ಮತ್ತು ಯೋಜನೆ ಕಾಮಗಾರಿ ತಕ್ಷಣ ನಿಲ್ಲಿಸುವಂತೆ ಕಳೆದ ಗುರುವಾರಷ್ಟೇ ಸಿದ್ದರಾಮಯ್ಯಗೆ ಪತ್ರ ಬರೆದಿದ್ದ ಸೋಮಣ್ಣ ಇದೀಗ ಮತ್ತೊಂದು ಪತ್ರೆ ಬರದಿದ್ದು ಜಿಲ್ಲೆಯ ರೈತರಿಗೆ ಅನ್ಯಾಯವಾಗುವ ಬಗ್ಗೆ ಹಾಗೂ ಕಾಮಗಾರಿ ನಿಲ್ಲಿಸುವಂತೆ ಸಾಕಷ್ಟು ಬಾರಿ ವಿನಂತಿ ಮಾಡಿದ್ದರು ಈ ಬಗ್ಗೆ ಸಿಎಂ ಗಮನಹರಿಸಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಯಿಂದ ಬಾಧಿತರಾಗುವ ಎಲ್ಲಾ ಸಂಬಂಧಪಟ್ಟ ಜನಪ್ರತಿನಿಧಿಗಳ ಸಭೆಯನ್ನು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವರ ಉಪಸ್ಥಿತಿಯಲ್ಲಿ (ಜೂ.9, 10 ಹೊರತುಪಡಿಸಿ) ಕರೆಯುವಂತೆ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೆ, ಸಭೆಗೆ ತಾಂತ್ರಿಕ ತಜ್ಞರನ್ನು, ಈ ಹಿಂದೆ ಕಾರ್ಯ ಸಾಧ್ಯತೆ ಇಲ್ಲವೆಂದು ವರದಿ ನೀಡಿದ್ದು ಈಗ ಯೋಜನೆಯ ಕಾರ್ಯಸಾಧ್ಯತೆಯ ಒಪ್ಪಿಗೆ ನೀಡಿರುವ ಅಧಿಕಾರಿಗಳು ಸಭೆಯಲ್ಲಿ ಹಾಜರಿರುವಂತೆ ಸೂಚಿಸಲು ಕೋರಿದ್ದಾರೆ.
ಕುಣಿಗಲ್ ಹಾಗೂ ತುಮಕೂರು ಭಾಗದ ಜನರ ನೆಮ್ಮದಿ ಮರು ಪ್ರತಿಷ್ಠಾಪಿಸಲು ಹಾಗೂ ಈ ಲಿಂಕ್ ಕೆನಾಲ್ ಹೋರಾಟದಲ್ಲಿ ಭಾಗಿಯಾದ ರೈತರು, ಮಠಾಧೀಶರು, ಜನಸಾಮಾನ್ಯರ ವಿರುದ್ಧ ದಾಖಲಾಗಿರುವು ಪೊಲೀಸ್ ಕೇಸ್ಗಳನ್ನು ಸರ್ಕಾರ ಹಿಂಪಡೆಯಬೇಕು. ವಿವಾದಿತ ಲಿಂಕ್ ಕೆನಾಲ್ನಿಂದ ಉದ್ಭವಿಸಿರುವ ಸಮಸ್ಯೆ ಕುರಿತು ಚರ್ಚಿಸಲು ಶ್ರೀ ಸಭೆ ಕರೆಯಬೇಕು. ವಿ.ಸೋಮಣ್ಣ ಕೇಂದ್ರ ಸಚಿವ
ಕಂದಕ ಸೃಷ್ಟಿ ವಿಷಾದಕರ
ಹೇಮಾವತಿ ಲಿಂಕ್ ಕೆನಾಲ್ ಫೀಡರ್ ಯೋಜನೆ ವಿಷಯದಲ್ಲಿ ಉಂಟಾಗಿರುವ ಗೊಂದಲದಿಂದಾಗಿ ಎರಡು ಜಿಲ್ಲೆಗಳ ನಡುವೆ ಕಂದಕ ಸೃಷ್ಟಿಯಾಗಿರುವುದು ಅತ್ಯಂತ ವಿಷಾದಕರ ಬೆಳವಣಿಗೆಯಾಗಿದೆ.
ಈ ಹಿನ್ನಲೆ ಎರಡೂ ಜಿಲ್ಲೆಯ ಜಪ್ರತಿನಿಧಿಗಳು, ಮುಖಂಡರು ಮತ್ತು ನೀರಾವರಿ ತಜ್ಞರ ಸಭೆ ಕರೆದು ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಅವಲೋಕಿಸಬೇಕು. ಸ್ಥಳಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೈತರು ಮತ್ತು ಜನಸಾಮಾನ್ಯರಿಗೆ ಅನುಕೂಲಾಗುವ ರೀತಿ ಕ್ರಮಕೃಗೊಳ್ಳಬೇಕೆಂದು ಸಿಎಂ ಸಿದ್ದರಾಮಯ್ಯಗೆ ಬರೆದಿರುವ ಪತ್ರದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಾ.ಸಿ.ಎನ್.ಮಂಜುನಾಥ್ ವಿನಂತಿಸಿಕೊಂಡಿದ್ದಾರೆ.