ದಶಪಥ ರಸ್ತೆ ನಿರ್ಮಿಸಿದ್ದು ವಾಹನ ಸಂಚಾರಕ್ಕೆ, ರೇಸ್ ಉದ್ದೇಶಕ್ಕೆ ಅಲ್ಲ್ಲ : ಸಂಸದ ಪ್ರತಾಪ್ ಸಿಂಹ

Pratap Simha
Published on

ಮೈಸೂರು: ಬೆಂಗಳೂರು-ಮೈಸೂರು ದಶಪಥ ರಸ್ತೆಯನ್ನು ವಾಹನಗಳ ಸಂಚಾರಕ್ಕೆ ನಿರ್ಮಾಣವಾಗಿದೆಯೇ ಹೊರತು ರೇಸ್ ಉದ್ದೇಶಕ್ಕೆ ನಿರ್ಮಿಸಿಲ್ಲ. ರಸ್ತೆಯನ್ನು ವೈಜ್ಞಾನಿಕವಾಗಿಯೇ ನಿರ್ಮಾಣ ಮಾಡಲಾಗಿದ್ದು, ವಾಹನಗಳು ಅತಿ ವೇಗದಲ್ಲಿ ಸಂಚರಿಸುತ್ತಿರುವ ಪರಿಣಾಮ ಅಪಘಾತ ಸಂಭವಿಸುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ರಸ್ತೆ ಯಾವ ಭಾಗದಲ್ಲಿ ಅವೈಜ್ಞಾನಿಕವಾಗಿದೆ ಎಂಬುದನ್ನು ಯಾರೇ ಮಹಾನುಭಾವರು ತಿಳಿಸಿದರೂ ಸರಿಪಡಿಸಲಾಗುವುದು. ದಶಪಥದಲ್ಲಿ ವಾಹನಗಳು ಸಂಚಾರ ಮಾಡುವುದಕ್ಕೆ ಅವಕಾಶ ಇದೆಯೇ ಹೊರತು ರೇಸ್‌ನಂತೆ ವಾಹನಗಳನ್ನು ಓಡಿಸಲು ಅವಕಾಶವಿಲ್ಲ. ರಸ್ತೆಯನ್ನು ರೇಸ್ ಟ್ರಾೃಕ್ ಅಂದುಕೊಂಡು ಹುಚ್ಚುಬಂದಂತೆ ಚಲಾಯಿಸಬಾರದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಬೆಂಗಳೂರು-ಮೈಸೂರು ಹೆದ್ದಾರಿ ಸಾವಿನ ಹೆದ್ದಾರಿಯಾಗಿ ಮಾರ್ಪಾಡು ಹೊಂದಿದ್ದು, ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣವಾಗಿರು ವುದೇ ಇದಕ್ಕೆ ಕಾರಣ’ ಎಂದು ಕೆಲವರು ಆರೋಪಿಸುತ್ತಿದ್ದಾರೆ. ರಸ್ತೆಯನ್ನು ವೈಜ್ಞಾನಿಕವಾಗಿಯೇ ನಿರ್ಮಾಣ ಮಾಡಲಾಗಿದ್ದು, ಇದುವರೆಗೆ ಸಂಭವಿಸಿದ ಅಪಘಾತಗಳ ಪೈಕಿ ಶೇ.90ರಷ್ಟು ಅಪಘಾತಗಳು ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಉಂಟಾಗಿದೆ. ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಸಚಿವರು, ಶಾಸಕರು ಸೇರಿದಂತೆ ಯಾರು ಬೇಕಾದರೂ ರಸ್ತೆಯನ್ನು ಪರಿಶೀಲಿಸಲಿ. ವೇಗ ನಿಯಂತ್ರಣದಲ್ಲಿ ಇದ್ದರೆ ಅಪಘಾತಗಳು ಸಂಭವಿಸುವುದಿಲ್ಲ ಎಂದರು.

ಕೆಲವರು 120 ರಿಂದ 150 ಕಿ.ಮೀ. ವೇಗದಲ್ಲಿ ವಾಹನ ಚಾಲಿಸುತ್ತಿದ್ದಾರೆ. ಗರಿಷ್ಠ 80 ಕಿ.ಮೀ. ವೇಗದಲ್ಲಿ ಸಂಚರಿಸಬೇಕಾದ ಮಾರುತಿ, ಇಂಡಿಕಾ ಹಾಗೂ ಇನ್ನಿತರ ಕಾರುಗಳು 120 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸುತ್ತಿವೆ. 2018 ರಲ್ಲಿ ದಶಪಥ ರಸ್ತೆ ನಿರ್ಮಾಣಕ್ಕೆ ಯೋಜನೆ ತಯಾರಿಸುವ ಸಂದರ್ಭ ಎರಡು ಕಡೆಗಳಲ್ಲಿ ಒಳಗೆ ಮತ್ತು ಹೊರಗೆ ಬರಲು ಮತ್ತು ವಿಶ್ರಾಂತಿ ಸ್ಥಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಳ್ಳಬೇಕಾಗಿತ್ತು. ಆದರೆ, ಆ ಸಂದರ್ಭ ಇದನ್ನು ಯೋಜನೆಯಲ್ಲಿ ಸೇರಿಸದ ಹಿನ್ನೆಲೆಯಲ್ಲಿ ಇದೀಗ ಹೆಚ್ಚುವರಿಯಾಗಿ 1200 ಕೋಟಿ ರೂ.ಖರ್ಚು ಮಾಡಲಾಗುತ್ತಿದೆ ಎಂದರು.

ಮೈಸೂರು ಭಾಗದಿಂದ ಹೊರಡುವ ಮಾರ್ಗದಲ್ಲಿ ಟೋಲ್ ಸಂಗ್ರಹಕ್ಕೆ ನಿರ್ಧರಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈಗಾಗಲೇ ಟೋಲ್ ಸಂಗ್ರಹ ಆರಂಭವಾಗಬೇಕಿತ್ತು. ಸಿದ್ದಲಿಂಗಪುರ ಬಳಿ ಫ್ಲೈ ಓವರ್ ಸೇರಿ ಇನ್ನಿತರ ಕಾಮಗಾರಿ ಮುಗಿದ ನಂತರ ಟೋಲ್ ಸಂಗ್ರಹಿಸುವಂತೆ ಹೇಳಿದ್ದರಿಂದ ಮುಂದೂಡಲಾಗಿತ್ತು. ಈಗ ಏನಾಗಿದೆ ಎಂಬುದರ ಕುರಿತು ಮಾಹಿತಿ ಪಡೆಯುತ್ತೇನೆ. ಮೈಸೂರು- ಬೆಂಗಳೂರು ಮಾರ್ಗದಲ್ಲಿ ಯಾವುದೇ ಸಮಸ್ಯೆ ಇಲ್ಲದಂತೆ ಮಾಡಲು ಏಳೆಂಟು ತಿಂಗಳು ಸಮಯ ಬೇಕಾಗಬಹುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net