ಎಕ್ಸ್​ಪ್ರೆಸ್​ ಕೆನಾಲ್​ ಹೋರಾಟ ನಿಲ್ಲದು

2
Published on

ಯೋಜನೆ ಸ್ಥಗಿತಕ್ಕೆ ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯ | ಹೊಸ ಯೋಜನೆ ಅಗತ್ಯವಿಲ್ಲ

ವಿಜಯವಾಣಿ ಸುದ್ದಿಜಾಲ ತುಮಕೂರು
ಹೇಮಾವತಿ ನಾಲೆಯಿಂದ ರಾಮನಗರ ಜಿಲ್ಲೆಗೆ ನೀರು ತೆಗೆದುಕೊಂಡು ಹೋಗಲು ಉದ್ದೇಶಿಸಿರುವ ಎಕ್ಸ್​ಪ್ರೆಸ್​ ಕೆನಾಲ್​ ಯೋಜನೆಗೆ ಮಾಜಿ ಸಚಿವ ಸೊಗಡು ಶಿವಣ್ಣ ವಿರೋಧ ಮುಂದುವರಿಸಿದ್ದು, ಗುರುತ್ವಾಕಾರ್ಷಣೆ ಮೂಲಕವೇ ಕುಣಿಗಲ್​ ತಾಲೂಕಿಗೆ ಸರಾಗವಾಗಿ ನೀರು ಹರಿಯಲಿದ್ದು, ಹೊಸ ಯೋಜನೆ ಅಗತ್ಯವಿಲ್ಲ ಎಂಬುದು ದೃಢವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.


ಕುಣಿಗಲ್​ ತಾಲೂಕಿನ ಪಾಲಿನ 3 ಟಿಎಂಸಿ ನೀರು ಹರಿಯಬೇಕು ಎಂಬುದರಲ್ಲಿ ಯಾರೊಬ್ಬರ ತಕರಾರು ಇಲ್ಲ. ಇರುವ ನಾಲೆಯಲ್ಲಿಯೇ 527 ಕ್ಯೂಸೆಕ್​ ನೀರು ಹರಿಸಲು ಸಾಮರ್ಥ್ಯವಿದ್ದು, ದಿನಕ್ಕೆ 45ರಿಂದ 50 ಎಂಸಿಎಫ್​ಟಿ ನೀರನ್ನು 60 ದಿನ ಸತತವಾಗಿ ಹರಿಸಿದರೆ, ನಿಗದಿತ 3 ಟಿಎಂಸಿ ಹರಿಯುತ್ತದೆ. ಹಾಗಿದ್ದರೂ ಸಹ ಟಿಬಿಸಿ 70 ಕಿಮೀ ಯಿಂದ 167ನೇ ಕಿಮೀಗೆ ಎಕ್ಸ್​ಪ್ರೆಸ್​ ಪೈಪ್​ಲೈನ್​ ಲಿಂಕ್​ ಕೆನಾಲ್​ ಯೋಜನೆ ಅಂದಾಜು 986 ಕೋಟಿ ರೂ. ವೆಚ್ಚದಲ್ಲಿ ಅನಗತ್ಯ ಮತ್ತು ಅನವಶ್ಯಕ ಯೋಜನೆ ಮಾಡುತ್ತಿರುವುದಾದರೂ ಏಕೆ ಎಂದು ಪ್ರಶ್ನಿಸಿದರು. ಸಾವಿರಾರು ಕೋಟಿ ರೂಪಾಯಿಗಳ ಅನಗತ್ಯ ಯೋಜನೆ ಮಾಡಿಸಿ, ನೂರಾರು ಕೋಟಿ ಸಾರ್ವಜನಿಕರ ತೆರಿಗೆ ಹಣ ಲೂಟಿ ಮಾಡುವ ಉದ್ದೇಶವೇ? ಅಥವಾ ಆಡಳಿತ ಮತ್ತು ಅಧಿಕಾರಿ ವರ್ಗ ಟಿ.ಬಿ.ಸಿ. ಕೊನೆಯ ಭಾಗಕ್ಕೆ ನೀರು ಹರಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಉದ್ದೇಶವಿರಬಹುದೇ ಎಂದು ಪ್ರಶ್ನಿಸಿದರು.


ಟಿಬಿಸಿ ನಾಲೆಯ 0 ಕಿಮೀ ಯಿಂದ 165 ಕಿಮೀ ವರೆಗೆ ನಾಲೆ ಆಧುನೀಕರಣಗೊಳಿಸಿದರೆ ನಿಗದಿತ ಪ್ರಮಾಣದ ನೀರನ್ನು ಕುಣಿಗಲ್​ ತಾಲೂಕಿಗೆ ಹರಿಸಬಹುದು. ಸರ್ಕಾರ ಎಚ್ಚೆತ್ತುಕೊಂಡು ಈ ಅನ ಗತ್ಯ, ಅನಾವಶ್ಯ ಕ ಯೋಜನೆ ಕೈಬಿಡದಿದ್ದರೆ ಜಿಲ್ಲೆಯ ಜನತೆ ಎಲ್ಲ ರೀತಿಯ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ. ಕೂಡಲೇ ಈ ಯೋಜನೆ ನಿಲ್ಲಿಸಲು ಆಗ್ರಹಿಸುತ್ತೇವೆ ಎಂದರು. ದಬ್ಬಾಳಿಕೆ ಮೂಲಕ ತಾಂತ್ರಿಕ ಇಲಾಖೆ ಮತ್ತು ಗುತ್ತಿಗೆದಾರರು ಕೆಲಸ ಪ್ರಾರಂಭಿಸಿದರೆ ಸಾರ್ವಜನಿಕ ಹಿತದೃಷ್ಟಿಯಿಂದ ತುಮಕೂರು ಜಿಲ್ಲೆಯ ರೈತರು, ನಾಗರಿಕರು, ಜನಜಾನುವಾರು, ಪ್ರಾಣಿಪಕ್ಷಿಗಳ ಕುಡಿಯುವ ನೀರಿಗಾಗಿ ಉಗ್ರ ಹೋರಾಟ ಮಾಡಲು ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.


ತುಮಕೂರು-ಕೊರಟಗೆರೆ ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ, ಮುಖಂಡರಾದ ಕೆ.ಹರೀಶ್​, ಮಹೇಶ್​ ಇದ್ದರು.

ಎಕ್ಸ್​ಪ್ರೆಸ್​ ಪೈಪ್​ಲೈನ್​ ಲಿಂಕ್​ ಕೆನಾಲ್​ ಯೋಜನೆ ಅನಾವಶ್ಯಕ ಹಾಗೂ ಅನಗತ್ಯ ಯೋಜನೆಯಾಗಿದ್ದು, ಸಾಧಕಭಾದಕಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ಸರ್ಕಾರದಿಂದ ರಚಿಸಿರುವ ತಾಂತ್ರಿಕ ತಜ್ಞರ ಸಮಿತಿ ಮಾಡಬೇಕಿದೆ. ತುಮಕೂರು ಶಾಖಾ ನಾಲೆಯಲ್ಲಿ ಹಾಲಿ ಆಧುನೀಕರಣಗೊಂಡಿರುವ ವಿನ್ಯಾಸಿತವಾಗಿರುವ ಕುಣಿಗಲ್​ ತಾಲೂಕಿಗೆ ನಿಗದಿಯಾಗಿರುವ ಟಿಎಂಸಿ ಪ್ರಮಾಣದ ನೀರು ಹರಿಸಲು ಸಾಧ್ಯವೇ ಅಥವಾ ಸಾಧ್ಯವಿಲ್ಲವೇ ಎಂಬುದರ ಬಗ್ಗೆಯೂ ಸಹ ತಜ್ಞರ ಸಮಿತಿ ಪರಿಶೀಲಿಸಿ ವರದಿ ಸಲ್ಲಿಸಲಿ.| ಸೊಗಡು ಶಿವಣ್ಣ ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net