ರಫ್ತು ಉತ್ತೇಜನಕ್ಕೆ ಕ್ರಿಯಾಯೋಜನೆ ರೂಪಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

Export Promotion Committee meeting Mandya
Published on

ಮಂಡ್ಯ: ರಫ್ತು ಉತ್ತೇಜನಕ್ಕೆ ಕ್ರಿಯಾಯೋಜನೆ ರೂಪಿಸಲು ಜಿಲ್ಲಾಮಟ್ಟದಲ್ಲಿ ಒಂದು ಸಮಿತಿ ರಚಿಸಬೇಕು. ಜತೆಗೆ ರಫ್ತಾಗುವ ಸಂಭಾವ್ಯ ಬೆಳೆ ಉತ್ಪನ್ನಗಳನ್ನು ಪಟ್ಟಿ ಮಾಡಬೇಕು. ರಫ್ತು ಹೆಚ್ಚಾಗುವ ಉತ್ಪನ್ನಗಳಿಗೆ ಸಂಬಂಧಿಸಿದ ನವೀನ ಬೆಳೆಗಳನ್ನು ಬೆಳೆಯಲು ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ರಫ್ತು ಉತ್ತೇಜನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಪ್ರಮುಖ ಉತ್ಪನ್ನಗಳಾದ ಬೆಲ್ಲ, ಸಕ್ಕರೆ, ಸಿರಿಧಾನ್ಯ ಸೇರಿದಂತೆ ಮುಖ್ಯ ಉತ್ಪನ್ನಗಳನ್ನು ಪಟ್ಟಿ ಮಾಡಿಕೊಳ್ಳಿ. ಬೇರೆ ಜಿಲ್ಲೆಗಳಲ್ಲಿನ ಉತ್ಪನ್ನಗಳ ರಫ್ತಿನ ದತ್ತಾಂಶ ಪಟ್ಟಿ ಮಾಡಿ. ಮಂಡ್ಯ ಜಿಲ್ಲೆಯಲ್ಲಿ ರಫ್ತಿಗೆ ಉತ್ತೇಜನ ಕೊಡವ ಕ್ಷೇತ್ರವನ್ನು ಗುರುತಿಸಿ ಎಂದರು.

ರಫ್ತು ಉತ್ತೇಜನ ಸಮಿತಿಯಲ್ಲಿ ಎಫ್‌ಪಿಒ ಹಾಗೂ ನಬಾರ್ಡ್ ಸಂಸ್ಥೆಗಳನ್ನು ಸೇರಿಸಬೇಕು. ಸಮಿತಿ ವತಿಯಿಂದ ರಫ್ತು ಉತ್ತೇಜನಕ್ಕೆ ತರಬೇತಿ ಕಾರ್ಯಕ್ರಮ ಪ್ರಾರಂಭಿಸಿ, ಅದರೊಂದಿಗೆ ಉಪಸಮಿತಿ ರಚಿಸಿ ನವೀನ ಬೆಳೆಗಳನ್ನು ಮುಂಚೂಣಿಗೆ ತರಬೇಕು. ಜಿಲ್ಲೆಯ ಕೃಷಿ ಉತ್ಪನ್ನಗಳು ಹೊರ ದೇಶಕ್ಕೆ ರಫ್ತು ಆಗುತ್ತಿಲ್ಲ. ಕೃಷಿ ಪ್ರಧಾನ ಜಿಲ್ಲೆಯಾಗಿರುವುದರಿಂದ ಸಿರಿ ಧಾನ್ಯಗಳು ಸೇರಿದಂತೆ ಬೆಲ್ಲ, ಸಕ್ಕರೆ ಇತರೆ ಕೃಷಿ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಬಹುದಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಟಿ.ದಿನೇಶ್, ಲೀಡ್ ಬ್ಯಾಂಕ್ ಮುಖ್ಯಸ್ಥ ಅರುಣ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net