ರಫ್ತು ಲಾಭದಾಯಕ ಉದ್ಯಮ

h30-kcci
Published on

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಇಲ್ಲಿನ ಕೆಸಿಸಿಐನಲ್ಲಿ ಏರ್ಪಡಿಸಿರುವ ರಫ್ತು ನಿರ್ವಹಣೆ ತರಬೇತಿ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ವಿಟಿಪಿಸಿ ನಿರ್ದೇಕ ಬಿ.ಕೆ. ಶಿವಕುಮಾರ ಉದ್ಘಾಟಿಸಿ ಮಾತನಾಡಿ, ನವೋದ್ಯಮಿಗಳು ಹಾಗೂ ಭಾವಿ ರಫ್ತುದಾರರಿಗೆ ರಫ್ತು ಲಾಭದಾಯಕ ಉದ್ಯಮವಾಗಿದೆ. ವರ್ಷಪೂರ್ತಿ ಮಾರುಕಟ್ಟೆ ಇರುವುದರಿಂದ ಹೆಚ್ಚಿನ ಗುಣಮಟ್ಟದ ಸರಕು ಅಥವಾ ಸೇವೆ ರಫ್ತು ಮಾಡಬಹುದು. ಬೇಡಿಕೆ ಆಧರಿಸಿ ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ತಲುಪಿಸಿದಲ್ಲಿ ರಫ್ತು ಉದ್ಯಮ ವಿಸ್ತಾರವಾಗಲಿದೆ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಭೀಮಪ್ಪ ಎನ್. ಮಾತನಾಡಿ, ರಫ್ತು ತರಬೇತಿ ಶಿಬಿರವು ಪರಿಪಕ್ವವಾದ ರಫ್ತುದಾರರನ್ನು ಹುಟ್ಟು ಹಾಕುತ್ತಿದೆ. ಕಳೆದ 15 ವರ್ಷಗಳಿಂದ ಈ ಶಿಬಿರ ಹುಬ್ಬಳ್ಳಿ ಸೇರಿದಂತೆ ಇತರ ಭಾಗಗಳಲ್ಲಿ ನಡೆಯುತ್ತಿದೆ. ಕೆಸಿಸಿಐ ಕೂಡ ಸಹಕರಿಸುತ್ತಿದೆ. ಯಶಸ್ವಿ ರಫ್ತುದಾರರಾಗಬೇಕೆಂದರೆ ಜವಾಬ್ದಾರಿ ಹಾಗೂ ಹೊಣೆಗಾರಿಕೆ ಅತ್ಯಗತ್ಯ ಎಂದರು.
ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ ಹಾಗೂ ವಿಟಿಪಿಸಿ ಸಹಾಯಕ ನಿರ್ದೇಶಕ ಟಿ.ಎಸ್. ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ಉಪಾಧ್ಯಕ್ಷ ಪ್ರವೀಣ ಅಗಡಿ, ವೀರೇಶ ಮೊಟಗಿ, ಭಾಸ್ಕರ, ಮಹೇಂದ್ರ ಸಿಂಘಿ, ನಂದೀಶ ಅಣ್ಣಿಗೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net