

ಹುಬ್ಬಳ್ಳಿ : ರಫ್ತು ವ್ಯವಹಾರದಿಂದ ಲಾಭದ ಜತೆಗೆ ನಮ್ಮ ದೇಶದ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸುವಲ್ಲಿ ಪಾಲುದಾರರಾಗಬಹುದು ಎಂದು ವಿಟಿಪಿಸಿ ಸಂಸ್ಥೆ ಬೆಂಗಳೂರು ಜಂಟಿ ನಿರ್ದೇಶಕ ಬಾಬು ನಾಗೇಶ ಹೇಳಿದರು.
ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಆಯೋಜಿಸಿರುವ ಭಾವಿ ರಫ್ತುದಾರರಿಗೆ ಆರು ದಿನಗಳ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಫ್ತು ವ್ಯವಹಾರದ ವಿಧಾನಗಳು, ಬೇಡಿಕೆ ಇರುವ ಉತ್ಪನ್ನಗಳ ಆಯ್ಕೆ, ಗುಣಮಟ್ಟ ಹಾಗೂ ಉತ್ತಮ ಪ್ಯಾಕೇಜಿಂಗ್ ಅಳವಡಿಸಿಕೊಂಡಲ್ಲಿ ಯಶಸ್ವಿ ರಫ್ತುದಾರರಾಗಲು ಸಾಧ್ಯ ಎಂದು ಸಲಹೆ ನೀಡಿದರು.
ಕರ್ನಾಟಕವು 2024-25ನೇ ಸಾಲಿಗೆ ಸಾಫ್ಟ್್ಟೇರ್ ಕ್ಷೇತ್ರದಲ್ಲಿ 1,59,019ಮಿಲಿಯನ್ ಡಾಲರ್ ರಫ್ತು ಕೈಗೊಂಡಿದ್ದು, ದೇಶದಲ್ಲಿಯೇ ಸೇವಾ ವಲಯದಲ್ಲಿ ಮೊದಲನೇ ಸ್ಥಾನ ಹೊಂದಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ರಪ್ತು ಕೈಗೊಳ್ಳಲಾಗುತ್ತಿರುವುದು ವಿಶೇಷ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ಮಾತನಾಡಿ, ರಫ್ತು ಮಾರುಕಟ್ಟೆ ವಿಸ್ತಾರವಾಗಿದ್ದು, ವರ್ಷವಿಡಿ ಉತ್ಪನ್ನಗಳ ರಫ್ತು ಮಾಡಲು ಸಾಕಷ್ಟು ಅವಕಾಶಗಳಿವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಧಾರವಾಡ ವಿಟಿಪಿಸಿ ಉಪ ನಿರ್ದೇಶಕ ಟಿ.ಎಸ್. ಮಲ್ಲಿಕಾರ್ಜುನ, ರಫ್ತು ವಿಧಾನಗಳು, ಮಾರುಕಟ್ಟೆ, ಪ್ಯಾಕೇಜಿಂಗ್, ಕ್ರೆಡಿಟ್ ಸೌಲಭ್ಯ, ಕಸ್ಟಮ್್ಸ ವಿಧಾನಗಳು, ಸಾಗಾಟ ಮತ್ತು ಇ-ಕಾಮರ್ಸ್ ವೇದಿಕೆಯಿಂದ ಸಣ್ಣ ಉದ್ದಿಮೆಗಳಿಗೆ ರಫ್ತಿಗೆ ಇರುವ ಅವಕಾಶಗಳ ಕುರಿತು ಪರಿಣಿತರಿಂದ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ಸಹಾಯಕ ಕಾರ್ಯದರ್ಶಿ ನಂದಿಶ ಅಣ್ಣಗೇರಿ ನಿರೂಪಿಸಿದರು. ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ ವಂದಿಸಿದರು.