ಚಿತ್ರದುರ್ಗದಲ್ಲಿ ಜ.28ರಂದು ಶೋಷಿತರ ಜಾಗೃತಿ ಸಮಾವೇಶ

mysore
Published on

ಮೈಸೂರು: ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಹಯೋಗದಲ್ಲಿ ಶೋಷಿತರ ಜಾಗೃತಿ ಸಮಾವೇಶವನ್ನು ಜ.28ರಂದು ಬೆಳಗ್ಗೆ 11ಕ್ಕೆ ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಪೀಠದ ಪಕ್ಕದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ


ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಶೋಷಿತ ಸಮುದಾಯಗಳ ಸಚಿವರು, ಮುಖಂಡರು ಭಾಗವಹಿಸಲಿದ್ದಾರೆ. ಅಂದಾಜು ಐದು ಲಕ್ಷ ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸಮಾವೇಶದ ಸಂಚಾಲಕ ಮಾವಳ್ಳಿ ಶಂಕರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಎಚ್. ಕಾಂತರಾಜು ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಿ ಯಥಾವತ್ತಾಗಿ ಅಂಗೀಕರಿಸಿ ಅನುಷ್ಠಾನಗೊಳಿಸಬೇಕು. ಕೇಂದ್ರ ಸರ್ಕಾರ ಜಾತಿವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.


ಮೇಲ್ವರ್ಗದವರಿಗೆ ನೀಡಿರುವ ಆರ್ಥಿಕ ಹಿಂದುಳಿದ ವರ್ಗದ(ಇಡಬ್ಲುೃಎಸ್) ಶೇ.10ರಷ್ಟು ಮೀಸಲಾತಿ ಸೌಲಭ್ಯವನ್ನು ರದ್ದು ಪಡಿಸಬೇಕು. ಮಹಿಳಾ ರಾಜಕೀಯ ಮೀಸಲಾತಿಯಡಿ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತರಿಗೂ ಅವಕಾಶ ಕಲ್ಪಿಸಬೇಕು, ಜನಸಂಖ್ಯೆಗೆ ಅನುಗುಣವಾಗಿ ಶೇಕಡವಾರು ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು, ಖಾಸಗಿ ಕ್ಷೇತ್ರಕ್ಕೂ ಮೀಸಲಾತಿ ಸೌಲಭ್ಯವನ್ನು ವಿಸ್ತರಿಸಬೇಕೆಂದು ಸಮಾವೇಶದಲ್ಲಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ತಿಳಿಸಿದರು.


ಮುಖಂಡರಾದ ಕೆ.ಎಂ.ರಾಮಚಂದ್ರಪ್ಪ, ಕೆ.ವೆಂಕಟಸುಬ್ಬರಾಜು, ಕೃಷ್ಣಮೂರ್ತಿ, ರಾಮಕೃಷ್ಣಪ್ಪ, ಎಣ್ಣೆಗೆರೆ ಆರ್.ವೆಂಕಟರಾಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net