ಶೋಷಣೆ ತಪ್ಪಿಸಿದ ಸ್ವನಿಧಿ ಯೋಜನೆ

h19-HDMC 2
Published on

ಹುಬ್ಬಳ್ಳಿ: ಸಮಾಜದಲ್ಲಿ ದುರ್ಬಲ ವರ್ಗದವರು, ಶೋಷಿತರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಬೀದಿಬದಿ ವ್ಯಾಪಾರಸ್ಥರಿಗಾಗಿ ಪಿಎಂ ಸ್ವನಿಧಿ ಯೋಜನೆ ಅತ್ಯಂತ ಯಶಸ್ವಿಯಾಗಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಇಲ್ಲಿಯ ಖಾಸಗಿ ಹೋಟೆಲ್​ನಲ್ಲಿ ಮಂಗಳವಾರ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ ಸ್ವನಿಧಿ ಮಹೋತ್ಸವ-ಬೀದಿಬದಿ ವ್ಯಾಪಾರಸ್ಥರ ಸಂಭ್ರಮಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೀದಿಬದಿ ವ್ಯಾಪಾರಸ್ಥರಿಗೂ ಪ್ರಧಾನಿ ನರೇಂದ್ರ ಮೋದಿ ಅವರು ಜೀವನ ಭದ್ರತೆ ಒದಗಿಸುವ ಕಾನೂನು ರೂಪಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಭರವಸೆ ತುಂಬಿದ್ದಾರೆ. ಈ ಯೋಜನೆಯನ್ನು ಇನ್ನಷ್ಟು ಶಿಸ್ತು ಬದ್ಧವಾಗಿ ಜಾರಿ ಮಾಡಲು ಸಾಲ ಪಡೆದವರು ಸರಿಯಾಗಿ ಮರುಪಾವತಿ ಮಾಡಿ ಹೆಚ್ಚಿನ ಸೌಲಭ್ಯ ಹಾಗೂ ಬಡ್ಡಿ ಸಬ್ಸಿಡಿ ಪಡೆದುಕೊಳ್ಳಬೇಕು ಎಂದರು.
ಕಿರುಕಳದಿಂದ ಮುಕ್ತಿ: ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಖಾಸಗಿ ಬಡ್ಡಿ ವ್ಯಾಪಾರ ಮಾಡುವವರ ಕಿರುಕಳದಿಂದ ಈಗ ಬೀದಿಬದಿ ವ್ಯಾಪಾರಸ್ಥರಿಗೆ ಮುಕ್ತಿ ಸಿಕ್ಕಂತಾಗಿದೆ. ಈ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಅವರು, ಯೋಜನೆಯ ನೋಡಲ್ ಅಧಿಕಾರಿ ರಮೇಶ ನೂಲ್ವಿ ಅವರ ನೇತೃತ್ವದ ತಂಡ ಉತ್ತಮ ಕಾರ್ಯನಿರ್ವಹಿಸಿ ಅತಿ ಹೆಚ್ಚು ಜನರಿಗೆ ಇದರ ಪ್ರಯೋಜನ ಸಿಗುವಂತೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪಾಲಿಕೆ ಸಭಾನಾಯಕ ತಿಪ್ಪಣ್ಣ ಮಜ್ಜಗಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ ಆರ್., ಪಟ್ಟಣ ಮಾರಾಟ ಸಮಿತಿ ಸದಸ್ಯ ಪ್ರೇಮನಾಥ ಚಿಕ್ಕತುಂಬಳ ಮಾತನಾಡಿದರು. ಉಪಮೇಯರ್ ಉಮಾ ಮುಕುಂದ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ವಿರೋಧ ಪಕ್ಷದ ನಾಯಕ ದೊರಾಜ ಮಣಿಕುಂಟ್ಲ, ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ, ಶಿವು ಮೆಣಸಿನಕಾಯಿ, ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆಯ ಅಕ್ಕಮಹಾದೇವಿ ಶೆಟ್ಟರ್, ಬೀದಿಬದಿ ವ್ಯಾಪಾರಸ್ಥರು ಭಾಗವಹಿಸಿದ್ದರು.
ಸಂಪತಕುಮಾರ ಪ್ರಾರ್ಥಿಸಿದರು. ಮೌನೇಶ ಬಡಿಗೇರ ತಂಡದವರು ನಾಡಗೀತೆ ಪ್ರಸ್ತುತ ಪಡಿಸಿದರು. ಪಾಲಿಕೆ ವಿಶೇಷ ಅಧಿಕಾರಿ ಎಸ್.ಸಿ. ಬೇವೂರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net