

ಬೆಂಗಳೂರು: ಜೇಬಿನಲ್ಲಿ ಇಟ್ಟಿದ್ದ ಮೊಬೈಲ್ ಸಿಡಿದ ಪರಿಣಾಮ ಯುವಕನ ತೊಡೆಗೆ ಗಾಯವಾಗಿರುವ ಪ್ರಕರಣ ವೈಟ್‌ಫೀಲ್ಡ್‌ನಲ್ಲಿ ನಡೆದಿದೆ.
ವೈಟ್‌ಫೀಲ್ಡ್ ನಿವಾಸಿ ಪ್ರಸಾದ್ (24 ) ಗಾಯಗೊಂಡವರು.
ಪ್ರಸಾದ್ ಅಕ್ಟೋಬರ್ ತಿಂಗಳಲ್ಲಿ ಒನ್ ಪ್ಲಸ್ ಕಂಪನಿಯ ಮೊಬೈಲ್ ಖರೀದಿಸಿ ಬಳಸುತ್ತಿದ್ದರು. ಬುಧವಾರ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಜೇಬಿನಲ್ಲಿ ಇಟ್ಟುಕೊಂಡಿದ್ದ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆಗಿದೆ. ಗಾಯಗೊಂಡಿರುವ ಪ್ರಸಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಶಸಚಿಕಿತ್ಸೆಗೆ ವೈದ್ಯರು ಲಕ್ಷಾಂತರ ರೂ. ಖರ್ಚಾಗುತ್ತದೆ ಎಂದು ತಿಳಿಸಿದ್ದಾರೆ.
ಮೆಡಿಕಲ್ ವೆಚ್ಚ, ಮೊಬೈಲ್ ಹಣ ಕೊಡುತ್ತೇವೆ:
ಮೊಬೈಲ್ ಸ್ಫೋಟ ಪ್ರಕರಣ ಶೋ ರೂಂ ಅವರ ಗಮನಕ್ಕೆ ಬರುತ್ತಿದ್ದಂತೆ ಮೆಡಿಕಲ್ ವೆಚ್ಚದ ಜತೆಗೆ ಮೊಬೈಲ್ ಹಣ ಕೊಡುತ್ತೇವೆ ಎನ್ನುತ್ತಿದ್ದಾರೆ. ಆದರೆ ಸರ್ಜರಿಗೆ ಬರೋಬ್ಬರಿ ೪ ಲಕ್ಷ ರೂ. ಖರ್ಚು ಆಗುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇದರಿಂದ ಪೂರ್ಣ ಪ್ರಮಾಣದ ಬಿಲ್ ಭರಿಸುವಂತೆ ಗಾಯಾಳು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಸಮಸ್ಯೆ ಹೇಳಿಕೊಳ್ಳಲು ಕುಟುಂಬ ಸದಸ್ಯರು ಮೊಬೈಲ್ ಸೆಂಟರ್‌ಗೆ ಹೋದರೆ ಸರಿಯಾಗಿ ಸ್ಪಂದಿಸದ ಆರೋಪ ಕೂಡ ಕೇಳಿಬಂದಿದೆ.
ವಕೀಲರ ಮೊರೆ ಹೋಗಲು ನಿರ್ಧಾರ:
ವೈಟ್‌ಫೀಲ್ಡ್ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರಸಾದ್‌ಗೆ ಈಗ ಮೊಬೈಲ್ ಸ್ಫೋಟದಿಂದ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಕೆಲಸ ಮಾಡದೇ ವಿಶ್ರಾಂತಿ ಪಡೆದರೆ ಮನೆಗೆ ಮತ್ತು ತನ್ನ ಖರ್ಚಿಗೆ ಹಣ ಯಾರು ಕೊಡುತ್ತಾರೆ ಎಂಬಂತಹ ಪ್ರಶ್ನೆ ಎದುರಾಗಿದೆ. ಈ ಹಿನ್ನೆಲೆ ಕಂಪನಿಯವರೇ ಸಂಪೂರ್ಣ ವೆಚ್ಚ ಭರಿಸಬೇಕು ಎಂದು ಆಗ್ರಹಿಸಿತ್ತಿದ್ದು, ವಕೀಲರ ಮೊರೆ ಹೋಗಲು ಪ್ರಸಾದ್ ನಿರ್ಧರಿಸಿದ್ದಾರೆ.