

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ(ಮಿಮ್ಸ್)ಲ್ಲಿ 80 ಲಕ್ಷ ರೂ ಮೌಲ್ಯದ ರೆಮ್ಡಿಸೀವರ್ ಹಾಗೂ ವಿವಿಧ ಕಂಪನಿಗೆ ಸೇರಿದ ಅವಧಿ ಮೀರಿದ ಔಷಧ ಲೋಕಾಯುಕ್ತ ಪೊಲೀಸರ ದಾಳಿ ವೇಳೆ ಪತ್ತೆಯಾಗಿದೆ.
ಈ ಕುರಿತು ಕೇಶವಮೂರ್ತಿ ಎಂಬುವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಅಂತೆಯೇ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದರು. ಲೋಕಾಯುಕ್ತ ಎಸ್ಪಿ ಸುರೇಶ್ ನೇತೃತ್ವದಲ್ಲಿ 20 ಅಧಿಕಾರಿಗಳ ತಂಡ ಮಿಮ್ಸ್‌ನ ಉಗ್ರಾಣದಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಯಿಂದ ಬುಧವಾರ ಬೆಳಿಗ್ಗೆ 11ರವರೆಗೆ ಕಾರ್ಯಾಚರಣೆ ನಡೆಸಿದ ವೇಳೆ ಔಷಧ ಸಿಕ್ಕಿದೆ. ಈ ವೇಳೆ 40 ಲಕ್ಷ ರೂ ಮೌಲ್ಯದ ರೆಮ್ಡಿಸೀವರ್(ಕರೊನಾ ಸೋಂಕಿತರಿಗೆ ನೀಡುವ ಔಷಧ) ಹಾಗೂ 2015ರಿಂದ 2017ರವರೆಗೆ ಖರೀದಿಸಿದ ಔಷಧ ಅವಧಿ ಮೀರಿದ್ದರೂ ವಿಲೇವಾರಿ ಮಾಡದಿರುವುದು ಬೆಳಕಿಗೆ ಬಂದಿದೆ.
ಅವಧಿ ಮೀರಿದ ಔಷಧವನ್ನು ಸಂಬಂಧಪಟ್ಟ ಕಂಪನಿಗಳಿಗೆ ವಾಪಸ್ ಕಳುಹಿಸಿ ಬದಲಿ ಔಷಧಗಳನ್ನು ಪಡೆಯಲು ಅವಕಾಶ ಹಾಗೂ ನಿಯಮವಿದೆ. ಇದಕ್ಕಾಗಿಯೇ ಪ್ರತ್ಯೇಕ ಸಮಿತಿ ಕೆಲಸ ಮಾಡುತ್ತಿದೆ. ಆದರೆ, ಔಷಧ ಪೂರೈಕೆದಾರರು ಮತ್ತು ಮಿಮ್ಸ್ ಅಧಿಕಾರಿಗಳು ಒಳ ಒಪ್ಪಂದದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆನ್ನುವ ಆರೋಪ ಕೇಳಿಬಂದಿದೆ. ರೋಗಿಗಳಿಗೆ ಉಚಿತವಾಗಿ ಕೊಡಬೇಕಿದ್ದ ಔಷಧವನ್ನು ವಿತರಿಸದೇ, ಉಗ್ರಾಣದಲ್ಲೇ ದಾಸ್ತಾನು ಮಾಡಿ ಹಾಳು ಮಾಡಲಾಗಿದೆ. ಈ ಬಗ್ಗೆ ಉನ್ನತಮಟ್ಟದ ತನಿಖೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸುತಿದ್ದಾರೆ.
ದಾಳಿ ವೇಳೆ ಡಿವೈಎಸ್ಪಿಗಳಾದ ಸುನಿಲ್‌ಕುಮಾರ್, ಮ್ಯಾಥ್ಯೂ, ಇನ್‌ಸ್ಪೆಕ್ಟರ್‌ಗಳಾದ ಬ್ಯಾಟರಾಯಗೌಡ, ಮೋಹನರೆಡ್ಡಿ, ಲೋಕೇಶ್, ಶಶಿಕುಮಾರ್, ಲೋಹಿತ್ ಮತ್ತು ಸಿಬ್ಬಂದಿ ಇದ್ದರು.
ಹಿಂದೆಯೂ ನಡೆದಿತ್ತು
ಮಿಮ್ಸ್‌ನಲ್ಲಿ ಅವಧಿ ಮೀರಿದ ಔಷಧ ಪತ್ತೆಯಾಗುತ್ತಿರುವುದು ಇದೇ ಮೊದಲೇನಲ್ಲ. 2016-17ರಲ್ಲೂ 5 ಲಕ್ಷ ರೂ ಮೌಲ್ಯದ ಅವಧಿ ಮೀರಿದ ಔಷಧ ಸಿಕ್ಕಿತ್ತು. ಈ ಸಂಬಂಧ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇನ್ನು ಪ್ರಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಅವಧಿ ಮೀರಿದ ಔಷಧವನ್ನು ವಿಲೇವಾರಿ ಮಾಡದೇ ಹಾಗೂ ಬದಲಿ ಔಷಧವನ್ನು ತರಿಸಿಕೊಳ್ಳದೇ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತರಿಗೆ ವರದಿ ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸಲಿದ್ದಾರೆಂದು ತಿಳಿದುಬಂದಿದೆ. ಅದರಂತೆ ಉಪ ಲೋಕಾಯುಕ್ತರು ವಿಚಾರಣೆ ನಡೆಸಿ, ಸರ್ಕಾರಕ್ಕೆ ವರದಿ ನೀಡಲಿದ್ದಾರೆ.