ಕನ್ನಡ ವಿದ್ವತ್ ಲೋಕದಲ್ಲಿ ತಜ್ಞತೆ ಮರೆ

web 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕನ್ನಡ ವಿದ್ವತ್ ಲೋಕದಲ್ಲಿ ತಜ್ಞತೆ ಮರೆಯಾಗುತ್ತಿದೆ. ಶಾಸನ ಚರಿತ್ರೆ, ಶಾಸ್ತ್ರ ವಿಷಯಗಳಲ್ಲಿ ಈಗಿನ ತಲೆಮಾರಿನಲ್ಲಿ ವಿಶೇಷ ಪರಿಣಿತ ಕಾಣದೆ ಕನ್ನಡ ವಿದ್ವತ್ ಕ್ಷೇತ್ರ ಬಡವಾಗುತ್ತಿದೆ ಎಂದು ಹಂಪಿ ಕನ್ನಡ ವಿವಿ ಕುಲಪತಿ ಪ್ರೊ. ಡಿ.ವಿ. ಪರಮಶಿವಮೂರ್ತಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಾ. ವೀರಣ್ಣ ರಾಜೂರ ದತ್ತಿ ನಿಮಿತ್ತ ಮಂಗಳವಾರ ಆಯೋಜಿಸಿದ್ದ ರಾಜಮಾರ್ಗ ಪ್ರಶಸ್ತಿ ಪ್ರದಾನ ಹಾಗೂ ಡಾ. ವೀರಣ್ಣ ರಾಜೂರರ ಆರು ಗ್ರಂಥಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಾ. ಬಿ. ನಂಜುಂಡಸ್ವಾಮಿಯಂತಹ ವಿದ್ವಾಂಸರಿಗೆ ಈ ಪ್ರಶಸ್ತಿ ದೊರಕಿದ್ದು ಸಂತಸ ತಂದಿದೆ. ತನು-ಮನ-ಧನದಿಂದ ಕನ್ನಡ ಗ್ರಂಥ ಸಂಪಾದನೆ, ಸಂಶೋಧನ ಕ್ಷೇತ್ರಗಳನ್ನು ಬೆಳೆಸಿರುವುದನ್ನು ಸ್ಮರಿಸಿದ ಅವರು, ಡಾ. ವೀರಣ್ಣ ರಾಜೂರ ಮಾತು ವಚನವಾಗಬೇಕು. ರಾಜೂರರ ಸೃಜನಶೀಲ ಕೃತಿಗಳು ಅವರ ಗ್ರಂಥ ಸಂಪಾದನೆ ಮಾರ್ಗ ಅನುಕರಣೀಯ ಎಂದರು.
ಪ್ರಶಸ್ತಿ ಸ್ವೀಕರಿಸಿದ ಡಾ. ಬಿ. ನಂಜುಂಡಸ್ವಾಮಿ ಮಾತನಾಡಿ, ಪ್ರಶಸ್ತಿ ಲಭಿಸಿದ್ದು ನನ್ನ ಜೀವನದ ಬಹುದೊಡ್ಡ ಭಾಗ್ಯ. ಪ್ರಶಸ್ತಿಯು ಸರಸ್ವತಿ ಸೇವೆಗೆ ಸಂದ ಪ್ರತಿಫಲ. ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದದರು.
ಪ್ರಾಧ್ಯಾಪಕಿ ಡಾ. ಗೌರಮ್ಮ ಎಸ್.ಎಂ. ಕೃತಿಗಳ ಪರಿಚಯ ಮಾಡಿದರು. ಡಾ. ವೀರಣ್ಣ ರಾಜೂರ ತಮ್ಮ ಜೀವನದ ಘಟನೆಗಳನ್ನು ಸ್ಮರಿಸಿದರು. ವಿದ್ಯಾರ್ಥಿಗಳಾದ ಡಾ. ಎಫ್.ಟಿ. ಹಳ್ಳಿಕೇರಿ, ಡಾ. ಗೌರಮ್ಮ ಎಸ್. ಎಂ. ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು.
ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಡಾ. ಎಫ್.ಟಿ. ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಧನವಂತ ಹಾಜವಗೋಳ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net