20 ದಿನಗಳಲ್ಲಿ ಕೆರೆಗಳಿಗೆ ಪ್ರಾಯೋಗಿಕ ನೀರು ಹರಿವು

IMG_20241006_154559
Published on

ಹಾಸನ: 70 ಕೋಟಿ ರೂ. ವೆಚ್ಚದಲ್ಲಿ ತೋಟಿ ನೀರಾವರಿ ಕಾಮಗಾರಿ ಪೂರ್ಣಗೊಳಿಸಿ ಇನ್ನು 20 ದಿನಗಳಲ್ಲಿ ಈ ಭಾಗದ ಕೆರೆಗಳನ್ನು ತುಂಬಿಸಲು ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.


ನುಗ್ಗೇಹಳ್ಳಿ ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರದಲ್ಲಿ ತುಂತುರು ನೀರಾವರಿ ಪೈಪ್‌ಗಳ ವಿತರಣೆ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.


ಅಕ್ಕನಹಳ್ಳಿ, ಜಿನ್ನೇನಹಳ್ಳಿ, ಬೆಳಗಿಹಳ್ಳಿ, ಮಟ್ಟನವಿಲೆ, ಜಂಬೂರು, ಗೌಡಗೆರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ತೋಟಿಕೆರೆ, ಮಾ ದಲಗೆರೆ, ಬೆಳಗಿಹಳ್ಳಿ, ಮೇಟಿಕೆರೆ, ಕಟಗಿಹಳ್ಳಿ, ಅಕ್ಕನಹಳ್ಳಿ, ಸೋಸಲಗೆರೆ, ಬದ್ದಿಕೆರೆ, ಹೆಬ್ಬಳಲು, ಬಾಣನಕೆರೆ, ಸಮುದ್ರಹಳ್ಳಿ, ಮುದ್ದನಹಳ್ಳಿ, ಹುಲಿಕೆರೆ, ಅತ್ತಿಹಳ್ಳಿ, ಕಗ್ಗೆರೆ, ಕಾವಲು ಹೊಸೂರು, ನರಸಿಂಹರಾಜಪುರ, ಬಳ್ಳಾರಿ ಕಾವಲು, ಚಿಕ್ಕೋನಹಳ್ಳಿ, ರಾಜಪುರ, ಮಾವಿನಹಳ್ಳಿ, ಮಟ್ಟನವಿಲೆ, ದೊಡ್ಡೇರಿ, ಎಂ. ಹೊನ್ನೇನಹಳ್ಳಿ, ಗೂಳಿ ಹೊನ್ನೇನಹಳ್ಳಿ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸುವುದರಿಂದ ಈ ಭಾಗದ ರೈತರ ಭೂಮಿಯಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಇದರಿಂದ ತೆಂಗು ಬೆಳೆ ಉಳಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.


ಸಂತೆ ಶಿವರ ನೀರಾವರಿ ಯೋಜನೆಗೆ 5 ಪೈಪ್‌ಗಳ ಜಾಗದ ಸಮಸ್ಯೆ ಇದೆ. ಕೂಡಲೇ ಇದನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನುಗ್ಗೇಹಳ್ಳಿ ಏತ ನೀರಾವರಿ ಯೋಜನೆಯ ಎಲ್ಲ ಕೆರೆಗಳನ್ನು ಹಂತ ಹಂತವಾಗಿ ತುಂಬಿಸಲಾಗುವುದು ಎಂದರು.
ತೋಟವನ್ನು ಟ್ರಾೃಕ್ಟರ್‌ನ ಐದು ನೇಗಿಲಿನಲ್ಲಿ ಉಳುಮೆ ಮಾಡಬೇಡಿ. ಇದರಿಂದ ಬೇರುಗಳು ಹರಿಯುತ್ತವೆ. 9 ಹಲ್ಲಿನ ಕಲ್ಟಿ ವೇಟರ್ ಉಪಯೋಗಿಸಿ ಎಂದು ತಿಳಿಸಿದರು.


ತಾಲೂಕಿನಲ್ಲಿ 600 ತುಂತುರು ನೀರಾವರಿ ಘಟಕಗಳ ಬೇಡಿಕೆ ಇದೆ. ಒಂದು ಯೂನಿಟ್ ಸ್ಪಿಂಕ್ಲರ್ ಸೆಟ್ ಬೆಲೆ 23,525 ರೂ. ರೈತರ ಪಾವತಿಸಬೇಕಾದ ವಂತಿಕೆ 4,139 ರೂ. ಆಗಿದೆ. ಉಳಿದ 19,420 ರೂ. ಸಹಾಯಧನವನ್ನು ಸರ್ಕಾರ ಪಾವತಿಸಲಿದೆ. ಹಾಗಾಗಿ, ರೈತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ತಿಳಿಸಿದರು.


ಸಹಾಯಕ ಕೃಷಿ ಅಧಿಕಾರಿ ಮೋಹನ್ ಮಾತನಾಡಿ, ಎಣ್ಣೆ ಗಾಣ, ರಾಗಿ ಹಿಟ್ಟು, ಮೌಲ್ಯವರ್ಧನೆ ಮಾರಾಟ ಹಾಗೂ ಬೇಕರಿ ಉತ್ಪನ್ನ ತಯಾರು ಮಾಡುವವರಿಗೆ ಸರ್ಕಾರದಿಂದ ಶೇ.50ರಷ್ಟು ಸಹಾಯಧನ ದೊರೆಯಲಿದೆ. ಆಸಕ್ತಿ ಇರುವ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಜೀ.ವಿ. ದಿನೇಶ್, ವಿಜಯಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠ್ಠಲ್ ಕುಮಾರ್, ಮುಖಂಡರಾದ ತೋಟಿ ನಾಗರಾಜ್, ಬಿ.ಆರ್. ದೊರೆಸ್ವಾಮಿ, ಬೆಳಗಳ್ಳಿ ಪುಟ್ಟಸ್ವಾಮಿ, ಯುವ ಮುಖಂಡ ಹುಲಿಕೆರೆ ಎಚ್.ಪಿ. ಸಂಪತ್ ಕುಮಾರ್, ಕೃಪಾ ಶಂಕರ್, ಸುರೇಶ್, ರಂಗಸ್ವಾಮಿ, ಶಂಕರ್, ಅಕ್ಕಿ ಉಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೊಪ್ಪಲು ಮಂಜುನಾಥ್, ಹೊನ್ನೇಗೌಡ, ಸಮುದ್ರಳ್ಳಿ ರಾಮಚಂದ್ರು, ಯಲ್ಲಪ್ಪ, ಜಾವೇದ್, ಅಪ್ಪಾಜಿ, ಗುಂಡಣ್ಣ, ರಮೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net