

ಹುಬ್ಬಳ್ಳಿ: ವರಕವಿ ಡಾ.ದ.ರಾ. ಬೇಂದ್ರೆ ಅವರ ಸಂಗೀತವನ್ನು ಕರ್ನಾಟಕದ ಎಲ್ಲ ಸಂಗೀತಗಾರರು ಪ್ರಯೋಗಿಸಿ ಜನಪ್ರಿಯಗೊಳಿಸಬೇಕು. ಅವರ ಸಂಗೀತ ವಿಶ್ವವನ್ನು ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳದ ಅಧ್ಯಕ್ಷ ಡಾ. ಕೆ.ಎಸ್. ಶರ್ಮಾ ಹೇಳಿದರು.
ಡಾ.ಕೆ.ಎಸ್. ಶರ್ಮಾ ಜನ್ಮ ದಿನ ನಿಮಿತ್ತ ವಿಶ್ವಶ್ರಮ ಚೇತನದಲ್ಲಿ ಸಂಜೀವಿನಿ ಆರ್ಯುವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಡಾ.ಕೆ.ಎಸ್. ಶರ್ಮಾ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿರುವ ವರಕವಿ ಬೇಂದ್ರೆ ಸಾಹಿತ್ಯ ಸಪ್ತಾಹದ ಎರಡೇ ದಿನವಾದ ಭಾನುವಾರ ಡಾ.ದ.ರಾ. ಬೇಂದ್ರೆ ಅವರ ಕವನಗಳ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೇಂದ್ರೆ ಅವರ ಸಂಗೀತವು ಮನುಷ್ಯನ ಬದುಕಿಗೆ ಆದರ್ಶ. ಅವರ ಸಾಹಿತ್ಯ ಹಾಗೂ ಅದರ ಆಯಾಮಗಳನ್ನು ಯುವ ಸಮೂಹಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಇಂತಹದೊಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಖ್ಯಾತ ಹಿಂದುಸ್ತಾನಿ ಗಾಯಕಿ ಸಂಗೀತಾ ಕಟ್ಟಿ ಮಾತನಾಡಿ, ನಾನು ಬಾಲ್ಯದಲ್ಲಿ ಮೊದಲನೇ ಹಾಡನ್ನು ಹಾಡಿದ್ದೇ ಬೇಂದ್ರೆಯವರದು. ಅಂದು ಕಾರ್ಯಕ್ರಮದಲ್ಲಿ ನನ್ನ ಹಾಡು ಕೇಳಿದ ಬೇಂದ್ರೆಯವರು ನನ್ನ ಕಡೆ ಸಾಕಷ್ಟು ಹಾಡುಗಳು ಇವೆ. ನಿನಗೆ ಕೊಡುತ್ತೇನೆ ಹಾಡು ಎಂದು ಹೇಳಿದ್ದರು. ಅಂತೆಯೇ ಇಂದು ಅವರ ಸ್ಮರಣೆಯ ಈ ಕಾರ್ಯಕ್ರಮದಲ್ಲಿ ಹಾಡುತ್ತಿರುವುದು ನನ್ನ ಸೌಭಾಗ್ಯ ಎಂದರು.
ಡಾ. ಕೆ.ಎಸ್. ಶರ್ಮಾ ಸಮೂಹ ಸಂಸ್ಥೆಗಳ ವತಿಯಿಂದ ಗಾಯಕಿ ಸಂಗೀತಾ ಕಟ್ಟಿ ಅವರನ್ನು ಸನ್ಮಾನಿಸಲಾಯಿತು. ಡಾ.ದ.ರಾ. ಬೇಂದ್ರೆ ಅವರ ಕವನಗಳ ಗಾಯನವನ್ನು ಪ್ರಸ್ತುತಪಡಿಸಲಾಯಿತು.
ಉಪ ಪ್ರಾಚಾರ್ಯ ಡಾ. ಮಹೇಶ ದೇಸಾಯಿ, ಡಾ. ಪ್ರತಿಭಾ ಹುಳ್ಳೂರು, ಡಾ.ಸಿ.ಸಿ. ಹಿರೇಮಠ, ಮಾಜಿ ಎಂಎಲ್ಸಿ ಮೋಹನ ಲಿಂಬಿಕಾಯಿ, ಡಾ. ಶ್ರೀನಿವಾಸ ಬನ್ನಿಕೊಳ್ಳ, ರವೀಂದ್ರ ಶೀಳೋರ, ಸೋಮಶೇಖರ ಹುದ್ದಾರ, ಪುನರ್ವಸು ಬೇಂದ್ರೆ, ಸಂಜಯ ತ್ರಾಸದ ಇತರರು ಇದ್ದರು.