ಅನುಭವಗಳೇ ಬದುಕಿನ ದಾರಿಗೆ ಸಹಕಾರಿ

28 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿ ಜೀವನದಲ್ಲಿ ಕಲಿತ ಜ್ಞಾನ ನಮ್ಮ ಜೀವನವನ್ನು ಸುಸ್ಥಿರವಾಗಿಡಲು ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿ ಜೀವನದ ಪ್ರತಿಯೊಂದು ಅನುಭವಗಳು ಬದುಕಿನ ದಾರಿ ಕಟ್ಟಿಕೊಳ್ಳಲು ಸಹಕಾರಿಯಾಗಲಿದೆ ಎಂದು ಕವಿವಿ ಕುಲಸಚಿವ ಡಾ. ಎ.ಚನ್ನಪ್ಪ ಹೇಳಿದರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜೀವರಸಾಯನಶಾಸ್ತ್ರ ವಿಭಾಗ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಜೀವರಸಾಯನಶಾಸ್ತ್ರದಲ್ಲಿ ಪ್ರಸ್ತುತ ಪ್ರಗತಿಗಳು ರಾಷ್ಟ್ರ ಮಟ್ಟದ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾವೆಲ್ಲರೂ ಇಲ್ಲಿ ಕಲಿಕೆಗೆ ಬಂದವರು. ನಮ್ಮಲ್ಲಿ ಕಲಿಯುವ ಹಂಬಲ ಹೆಚ್ಚಾದಾಗ, ಜ್ಞಾನದ ಹಸಿವು ಇದ್ದಾಗ ನಮ್ಮ ಕಲಿಕೆ ಅರ್ಥಪೂರ್ಣವಾಗುತ್ತದೆ. ಇಂತಹ ಸಮ್ಮೇಳನಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಜ್ಞಾನ ವೃದ್ಧಿಸಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜೀವ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಿ.ಎಂ. ಕನವಳ್ಳಿ ಮಾತನಾಡಿ, ರಾಷ್ಟ್ರೀಯ ಸಮ್ಮೇಳನದಲ್ಲಿ ಹಲವು ಆಸಕ್ತಿಕರ ವಿಷಯಗಳ ಬಗ್ಗೆ ಚರ್ಚೆಯಾಯಿತು. ಇಂತಹ ಸಮ್ಮೇಳನಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಸಹಕಾರಿಯಾಗಲಿದೆ ಎಂದರು.
ಉತ್ತಮ ಸಂಶೋಧನಾ ಪತ್ರಿಕೆಗಳ ಮೌಖಿಕ ಪ್ರಸ್ತುತಿ ಹಾಗೂ ಪೋಸ್ಟರ್ ಪ್ರಸ್ತುತಿ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಸಿಬ್ಬಂದಿ, ಇತರರು ಇದ್ದರು.
ಪ್ರೊ. ಕೆ.ಎಸ್. ದೇವರಾಜು ಸ್ವಾಗತಿಸಿದರು. ರಮ್ಯಾ ಪೈ ಮತ್ತು ಸೌಮ್ಯ ನಿರೂಪಿಸಿದರು. ಪ್ರೊ.ಎಸ್.ಕೆ. ಪ್ರವೀಣಕುಮಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net