ಹಾಪ್​ಕಾಮ್ಸ್​ನಲ್ಲಿ ದುಬಾರಿ ದರ: ಗ್ರಾಹಕರಿಂದ ದೂರು | ಆರೋಪ ನಿರಾಕರಿಸಿದ ವ್ಯವಸ್ಥಾಪಕ ನಿರ್ದೇಶಕ

hopcoms
Published on

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಇಡೀ ದೇಶ ಲಾಕ್​ಡೌನ್ ಆಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಚಿಲ್ಲರೆ ವ್ಯಾಪಾರಸ್ಥರು ದಿನಸಿ ಪದಾರ್ಥ, ತರಕಾರಿ ಹಾಗೂ ಹಣ್ಣುಗಳಿಗೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ. ಆದರೆ, ಸರ್ಕಾರಿ ಸ್ವಾಮ್ಯದ ಹಾಪ್​ಕಾಮ್ಸ್​ನಲ್ಲೂ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಬಗ್ಗೆ ದೂರುಗಳು ಕೇಳಿಬಂದಿವೆ.

ಕಠಿಣ ಕ್ರಮ: ಯಾವುದೇ ಕಾರಣಕ್ಕೂ ನಮ್ಮಲ್ಲಿ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚು ಹಣ ಪಡೆದಿಲ್ಲ. ಹಾಗೇನಾದರೂ ದೂರುಗಳು ಬಂದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ತಿಳಿಸಿದ್ದಾರೆ. ಎಲ್ಲ ಹಾಪ್​ಕಾಮ್ಸ್ಗಳಿಗೆ ಪ್ರತಿ ದಿನ ದರಪಟ್ಟಿಯನ್ನು ಬಿಲ್ಲಿಂಗ್ ವ್ಯವಸ್ಥೆಯಲ್ಲೇ ಅಳವಡಿಸಲಾಗಿದೆ. ಖರೀದಿಸಿದ ಪದಾರ್ಥಗಳಿಗೆ ಗ್ರಾಹಕರು ಬಿಲ್ ಕೇಳಿ ಪಡೆಯಬೇಕು. ಅಲ್ಲದೆ ಹಾಪ್​ಕಾಮ್ಸ್ ವೆಬ್​ಸೈಟ್​ನಲ್ಲೂ ಪ್ರತಿ ನಿತ್ಯದ ದರ ಪಟ್ಟಿ ಪರಿಷ್ಕೃತ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ವೆಬ್​ಸೈಟ್: http://hopcoms.karnataka.gov.in

ಸುಲಿಗೆ ಮಾಡಿದರೆ ಕಠಿಣ ಕ್ರಮ

ದಿನಸಿ ಹಾಗೂ ತರಕಾರಿಗಳನ್ನು ಮೂಲ ಬೆಲೆಗಳಿಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಸಾರ್ವಜನಿಕರ ಬಳಿ ಸುಲಿಗೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಎಚ್ಚರಿಕೆ ನೀಡಿದ್ದಾರೆ. ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಭಾನುವಾರ ಭೇಟಿ ನೀಡಿ ವರ್ತಕರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಕಿರಿದಾಗಿರುವ ಕಾರಣ ತಾತ್ಕಾಲಿಕವಾಗಿ ದಾಸನಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಲ್ಲೇ ಇರಬೇಕೋ ಅಥವಾ ಮತ್ತೆ ಯಶವಂತಪುರ ಮಾರುಕಟ್ಟೆಗೆ ಸ್ಥಳಾಂತರ ಮಾಡಬೇಕೋ ಎಂಬ ಬಗ್ಗೆ ಚಿಂತನೆ ಮಾಡಲಾಗುವುದು ಎಂದರು. ಸಚಿವ ಕೆ.ಗೋಪಾಲಯ್ಯ, ಕೃಷಿ ಉತ್ಪನ್ನ ಮಾರುಕಟ್ಟೆಯ ನಿರ್ದೇಶಕ ಕರೀಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net