

ಮಡಿಕೇರಿ
ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಕೊಡಗಿನ ಪ್ರಮುಖ ಪ್ರವಾಸಿತಾಣ ದುಬಾರೆಗೆ ಭೇಟಿ ನೀಡಬೇಕು ಎಂದರೆ ಈಗ ಜೇಬು ಗಟ್ಟಿ ಆಗಿರಬೇಕು. ಆಗಸ್ಟ್ನಿಂದ ಈಚೆಗೆ ಇಲ್ಲಿನ ಪ್ರವೇಶ ದರವನ್ನು ಅರಣ್ಯ ಇಲಾಖೆ ದುಪ್ಪಟ್ಟು ಮಾಡಿದೆ. ಈ ಮೂಲಕ ಸಾಮಾನ್ಯ ಪ್ರವಾಸಿಗರನ್ನು ಸಾಕಾನೆ ಶಿಬಿರ ವೀಕ್ಷಣೆಯಿಂದ ವಂಚಿತರನ್ನಾಗಿ ಮಾಡಿದಂತಾಗಿದೆ. ಈ ಬೆಳವಣಿಗೆ ಜಿಲ್ಲೆಯ ಪ್ರವಾಸೋದ್ಯಮದ ಮೇಲೂ ವ್ಯತರ‍್ಯಿಕ್ತ ಪರಿಣಾಮ ಬೀರಲು ಕಾರಣವಾಗಿದೆ.
ಕಳೆದ ವಾರವಷ್ಟೇ ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗಿದೆ. ಸೋಮವಾರ (ಸೆ.30) ಮಡಿಕೇರಿಯಲ್ಲಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದಲೂ ಪ್ರವಾಸೋದ್ಯಮ ದಿನವನ್ನು ಸಂಭ್ರಮಿಸಲಾಗಿದೆ. ಜಿಲ್ಲೆಗೆ ಹೆಚ್ಚು, ಹೆಚ್ಚು ಪ್ರವಾಸಿಗರನ್ನು ಸೆಳೆಯುವುದಕ್ಕೆ ಸಂಬAಧಿಸಿದAತೆ ಯೋಜನೆಗಳನ್ನು ರೂಪಿಸಲು ದೊಡ್ಡ ಮಟ್ಟದ ಚರ್ಚೆಯನ್ನೂ ನಡೆಸಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆಯ ಧನದಾಹ ಗಮನಿಸಿದರೆ ಪ್ರವಾಸಿಗರು ಜಿಲ್ಲೆಯ ಕಡೆಗೆ ಬೆನ್ನುಹಾಕಿ ನಡೆದÀರೂ ಅಚ್ಚರಿಯಿಲ್ಲ.
ಅರಣ್ಯ ಇಲಾಖೆಗೆ ಒಳಪಡುವ ಬೆಟ್ಟಗಳಲ್ಲಿ ಟ್ರಕ್ಕಿಂಗ್, ಅರಣ್ಯಗಳಲ್ಲಿ ಸಫಾರಿ, ಅರಣ್ಯ ಪ್ರದೇಶದ ಒಳಗೆ ಹಾದುಹೋಗುವ ರಸ್ತೆಗಳಿಗೆ ಶುಲ್ಕ…ಹೀಗೆ ಸಾಧ್ಯವಿರುವ ಎಲ್ಲಾ ಕಡೆಗಳಲ್ಲೂ ಮನಸೋಇಚ್ಛೆ ಹಣ ಸಂಗ್ರಹಕ್ಕೆ ಇಳಿದಿರುವ ಇಲಾಖೆಯ ಕಣ್ಣು ಈಗ ದುಬಾರೆ ಸಾಕಾನೆ ಶಿಬಿರ ಮೇಲೆ ಬಿದ್ದಿದೆ. ಆಗಸ್ಟ್ 1ರಿಂದ ಇಲ್ಲಿಯ ಪ್ರವೇಶ ಶುಲ್ಕ ದುಪ್ಪಟ್ಟು ಏರಿಸಲಾಗಿದೆ. ಈ ಮೂಲಕ 'ಬಜೆಟ್ ಪ್ರವಾಸಿ'ಗರನ್ನು ದುಬಾರೆ ಸಾಕಾನೆ ಶಿಬಿರದಿಂದ ದೂರ ಇಟ್ಟು 'ಕ್ಲಾಸ್ ಪ್ರವಾಸಿ'ಗರಿಗೆ ಮಾತ್ರ ಅವಕಾಶ ಕೊಡುವ ಹುನ್ನಾರ ನಡೆದಿರುವ ಆರೋಪ ಕೇಳಿಬರುತ್ತಿದೆ.
ವರ್ಷದ ಹಿಂದೆ ಏಕಾಏಕಿ ಪ್ರವೇಶ ದರವನ್ನು 150 ರೂ.ಗೆ ಹೆಚ್ಚಳ ಮಾಡಲಾಗಿತ್ತು. ಇದಕ್ಕೂ ಪ್ರವಾಸಿಗರು ಮತ್ತು ಪ್ರವಾಸೋದ್ಯಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೂ ಈ ವಿರೋಧಗಳಿಗೆಲ್ಲಾ ತಲೆಕೆಡಿಸಿಕೊಳ್ಳದ ಅರಣ್ಯ ಇಲಾಖೆ ಆಗಸ್ಟ್ನಿಂದ ಮತ್ತೆ ಪ್ರವೇಶ ದರ ಏರಿಕೆ ಮಾಡಿದೆ. ಸಾಮಾನ್ಯ ದಿನಗಳಲ್ಲಿ ಪ್ರವೇಶ ದರವನ್ನು ದೋಣಿ ಸಂಚಾರ ದರ ಸೇರಿ 180 ರೂ. ಮಾಡಿದ್ದರೆ, ಈ ವರ್ಷದಿಂದ ಶನಿವಾರ, ಭಾನುವಾರ, ಹಬ್ಬಗಳು, ಸರ್ಕಾರಿ ರಜಾ ದಿನಗಳಲ್ಲಿ ಬರೋಬ್ಬರಿ ದೋಣಿ ಸಂಚಾರ ಸೇರಿ 275 ರೂ. ಪಾವತಿಸಬೇಕು.
ಇದಲ್ಲದೆ ಸಾಮಾನ್ಯ ದಿನಗಳಲ್ಲಿ ಆನೆಗಳನ್ನು ಸ್ನಾನ ಮಾಡಿಸುವ ಅನುಭವ ಪಡೆದುಕೊಳ್ಳಲು ಪ್ರತ್ಯೇಕವಾಗಿ 300 ರೂ. ಪಾವತಿಸಬೇಕು. ಶನಿವಾರ, ಭಾನುವಾರ, ಹಬ್ಬಗಳು, ಸರ್ಕಾರಿ ರಜಾ ದಿನಗಳಲ್ಲಿ ಇದಕ್ಕಾಗಿ 500 ರೂ. ಶುಲ್ಕ ವಿಧಿಸಲಾಗುತ್ತದೆ. ಕ್ಯಾಮೆರಾದಿಂದ ಫೋಟೋ ತೆಗೆಯಲು ಮತ್ತೆ 400 ರೂ. ಹೆಚ್ಚುವರಿಯಾಗಿ ಕೊಡಬೇಕು. ಒಟ್ಟಾರೆಯಾಗಿ ಒಬ್ಬ ವ್ಯಕ್ತಿ ದುಬಾರೆ ಸಾಕಾನೆ ಶಿಬಿರದ ಸಂಪೂರ್ಣ ಅನುಭವ ಪಡೆಯಲು ಕನಿಷ್ಠ ಸಾವಿರ ರೂ. ಇಟ್ಟುಕೊಂಡಿರಬೇಕು. ಈ ಮೂಲಕ ನಾಲ್ವರು ಸದಸ್ಯರ ಕುಟುಂಬ ಇಲ್ಲಿಗೆ ಭೇಟಿ ಕೊಟ್ಟರೆ ಅವರ ಕೊಡಗು ಪ್ರವಾಸದ ಸಂಪೂರ್ಣ ಬಜೆಟ್ ದುಬಾರೆ ಸಾಕಾನೆ ಶಿಬಿರಕ್ಕೆ ಕಸಿದಿಕೊಳ್ಳುವ ಯೋಜನೆಯನ್ನು ಅರಣ್ಯ ಇಲಾಖೆ ಚಾಲ್ತಿಗೆ ತಂದAತಿದೆ.
ಆರ್ಥಿಕವಾಗಿ ಸದೃಢವಾಗಿರುವ ಪ್ರವಾಸಿಗರಿಗೆ ಈ ಮೊತ್ತ ದೊಡ್ಡದಲ್ಲ ಎಂದು ಅನ್ನಿಸಬಹುದು. ಆದರೆ ಸಾಮಾನ್ಯ ಪ್ರವಾಸಿಗ ಈ ಮೊತ್ತ ಬರಿಸಬಲ್ಲನೆ ಎನ್ನುವ ಚಿಂತನೆಯನ್ನೂ ಅರಣ್ಯ ಇಲಾಖೆ ನಡೆಸಿದಂತಿಲ್ಲ. ಸೀಮಿತ ಬಜೆಟ್‌ನಲ್ಲಿ ಪ್ರವಾಸ ಕೈಗೊಳ್ಳುವ ಶಾಲಾ ಮಕ್ಕಳಿಗೆ ದುಬಾರೆ ಸಾಕಾನೆ ಶಿಬಿರ ಇನ್ನು ಮುಂದೆ ಕೈಗೆಟುಕದ ನಕ್ಷತ್ರವೇ ಆಗಲಿದೆ. ನದಿಯ ಈಚೆ ದಡದಲ್ಲಿ ನಿಂತು 'ಅದೇ ದುಬಾರೆ' ಎಂದು ಕಣ್ತಂಬಿಸಿಕೊAಡು ಮರಳುವುದಷ್ಟೇ ಇಂಥವರಿಗೆ ಉಳಿದಿರುವ ದಾರಿ ಎನ್ನುವುದು ಸ್ಥಳೀಯ ಪ್ರವಾಸೋದ್ಯಮಿಗಳ ಅಭಿಪ್ರಾಯ.
ಹಾರಂಗಿ ಅಣೆಕಟ್ಟೆ ಬಳಿ ಜಲಾಶಯದ ಹಿನ್ನೀರು ಪ್ರದೇಶದಲ್ಲೂ ಸಾಕಾನೆ ಶಿಬಿರವೊಂದು ಕಾರ್ಯಾಚರಿಸುತ್ತಿದೆ. ಇಲ್ಲಿಯ ಪ್ರವೇಶ ದರ 50 ರೂ. ಮಾತ್ರ. ದುಬಾರೆಗೆ ಹೋಲಿಸಿದರೆ ಇದು ಕಡಿಮೆ ಮೊತ್ತವಾಗಿದೆ. ಹಾರಂಗಿ ಸಾಕಾನೆ ಶಿಬಿರ 2 ವರ್ಷಗಳ ಹಿಂದೆ ಆರಂಭವಾಗಿದ್ದು, ಇತ್ತ ಕಡೆಗೆ ಪ್ರವಾಸಿಗರನ್ನು ಸೆಳೆಯಲು ದುಬಾರೆಯಲ್ಲಿ ಪ್ರವೇಶ ದರ ಹೆಚ್ಚು ಮಾಡಲಾಗಿದೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ. ಆದರೆ ಸದ್ಯದಲ್ಲೇ ಹಾರಂಗಿಯಲ್ಲೂ ಪ್ರವೇಶದರ ಹೆಚ್ಚಳದ ಮುನ್ಸೂಚನೆ ಅರಣ್ಯ ಇಲಾಖೆ ಮೂಲಗಳಿಂದ ಸಿಕ್ಕಿದೆ. ಮತ್ತೊಂದು ಕಡೆ ದುಬಾರೆ ಸಾಕಾನೆ ಶಿಬಿರಕ್ಕೆ ಮಂಗಳವಾರ ರಜೆ ಕೊಡುತ್ತಿರುವುದಕ್ಕೂ ಪ್ರವಾಸೋದ್ಯಮಿಗಳಿಂದ ವಿರೋಧ ಇದೆ. ದುಬಾರೆಯ ಇತಿಹಾಸದಲ್ಲೇ ಇಲ್ಲದಿದ್ದ ರಜೆಯ ಸಂಪ್ರದಾಯ ಈಗ ಶುರುಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದೀಗ ದಸರಾ ರಜೆ ಶುರುವಾಗುತ್ತಿದ್ದು, ಈಗಲಾದರೂ ಅರಣ್ಯ ಇಲಾಖೆ ಪ್ರವಾಸಿ ಸ್ನೇಹಿ ಕ್ರಮಗಳಿಗೆ ಮುಂದಾಗಲಿ ಎನ್ನುವ ಆಗ್ರಹ ಸ್ಥಳೀಯರದ್ದು. ಈ ಮಧ್ಯೆ ಅರಣ್ಯ ಇಲಾಖೆಯ ಪ್ರವಾಸಿ ವಿರೋಧಿ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಲು ಕೂಡ ಸ್ಥಳೀಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ದುಬಾರೆ ಈಗ ದುಬಾರಿಯಾಗಿದೆ. ಆನೆಶಿಬಿರಕ್ಕೆ ಕಾಲಿಡಲು ಮೊದಲಿಗಿಂತ ಎರಡರಷ್ಟು ಹಣ ಪಾವತಿ ಮಾಡಬೇಕು. ಇದರ ಜತೆಗೆ ಪ್ರತಿ ಮಂಗಳವಾರ ರಜೆಯನ್ನೂ ಘೋಷಣೆ ಮಾಡಲಾಗಿದೆ. ಅರಣ್ಯ ಇಲಾಖೆ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸುವುದು ಬಿಟ್ಟು ನೇರವಾಗಿ ಅವರ ಜೇಬಿಗೆ ಕೈ ಹಾಕಿದೆ. ಇದು ಸ್ಥಳೀಯ ಪ್ರವಾಸೋದ್ಯಮದ ಮೇಲೆ ಕರಿನೆರಳು ಬೀಳುವಂತೆ ಮಾಡಿದೆ.
ಕೆ.ಜಿ. ಮನು, ಸಾಮಾಜಿಕ ಕಾರ್ಯಕರ್ತ, ಕುಶಾಲನಗರ
ದುಬಾರೆ ಸಾಕಾನೆ ಶಿಬಿರ ಪ್ರವೇಶ ದರ ದುಪಟ್ಟು ಮಾಡುವ ಮೂಲಕ ಅರಣ್ಯ ಇಲಾಖೆ ಹಗಲು ದರೋಡೆಗೆ ಇಳಿದಿದೆ. ಹಾರಂಗಿ ಸಾಕಾನೆ ಶಿಬಿರಕ್ಕೆ ಹೆಚ್ಚು ಪ್ರವಾಸಿಗರನ್ನು ಸೆಳೆಯಲು ಈ ಹುನ್ನಾರ ನಡೆಸಿರುವ ಸಾಧ್ಯತೆ ಇದೆ. ದುಬಾರೆ ಇತಿಹಾಸದಲ್ಲೇ ಆನೆ ಶಿಬಿರಕ್ಕೆ ವಾರದ ರಜೆ ಘೋಷಣೆಯ ಸಂಪ್ರದಾಯ ಇರಲಿಲ್ಲ. ಈಗ ಇದೂ ಶುರುವಾಗಿದೆ. ವಿಷಯವನ್ನು ಶಾಸಕರ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಹಾಗಾಗಿ ಮುಂದಿನ ವಾರ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಲಾಗಿದೆ.
ಸಿ.ಎಲ್. ವಿಶ್ವ, ಗ್ರಾಮ ಪಂಚಾಯಿತಿ ಅಧಕ್ಷ, ನಂಜರಾಯಪಟ್ಟಣ
ಪ್ರತಿವರ್ಷವೂ ದುಬಾರೆ ಸಾಕಾನೆ ಶಿಬಿರದ ಪ್ರವೇಶ ದರ ಹೆಚ್ಚು ಮಾಡಿಕೊಂಡು ಬರಲಾಗಿದೆ. ಅದರಂತೆ ಈ ವರ್ಷವೂ ಹೆಚ್ಚು ಮಾಡಲಾಗಿದೆ. 5 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಉಚಿತವಾಗಿ ಬಿಡಲಾಗುತ್ತದೆ. ಉಳಿದ ಮಕ್ಕಳಿಗೆ ಅರ್ಧ ದರ ತೆಗೆದುಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಾರಂಗಿ ಸಾಕಾನೆ ಶಿಬಿರಕ್ಕೂ ಪ್ರವೇಶ ದರ ಹೆಚ್ಚಳ ಮಾಡಲಾಗುವುದು.
ರತನ್ ಕುಮಾರ್, ವಲಯ ಅರಣ್ಯಾಧಿಕಾರಿ, ಕುಶಾಲನಗರ ವಲಯ