ಜಿಲ್ಲೆಯಲ್ಲಿ ನಿರೀಕ್ಷಿತ ರಾಗಿ ಇಳುವರಿ, ಶೇ.70 ಕಟಾವು, ಮಳೆ ಭೀತಿ ನಡುವೆಯೂ ಆಶಾದಾಯಕ ಬೆಳೆ

06 nandagudi 1
Published on

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಿಂದಾಗಿ ನಿರೀಕ್ಷಿತ ರಾಗಿ ಇಳುವರಿ ಬರುವ ಸಾಧ್ಯತೆ ಇದೆ. ಈಗಾಗಲೇ ಜಿಲ್ಲಾದ್ಯಂತ ಶೇ.70 ಕಟಾವು ಆಗಿದೆ. ಅಕಾಲಿಕ ಮಳೆ, ನಿವಾರ್ ಚಂಡಮಾರುತ, ಜಡಿ ಮಳೆ ಆತಂಕದ ನಡುವೆ ಉತ್ತಮ ಸಲು ಕೈಸೇರುವ ನಿರೀಕ್ಷೆ ಇದ್ದರೂ ನವೆಂಬರ್ ಅಂತ್ಯದಲ್ಲಿ ಸುರಿದ ಜಡಿ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗಿಲ್ಲವಾಗುತ್ತದೆ ಎಂಬ ಆತಂಕದಲ್ಲಿದ್ದ ರೈತರಲ್ಲಿ ಮಳೆ ಕಣ್ಮರೆಯಾಗಿದ್ದು ತುಸು ನೆಮ್ಮದಿ ಮೂಡಿಸಿದೆ.

ನವೆಂಬರ್ ಮೂರನೇ ವಾರದಲ್ಲಿ ಕೊಯ್ಲು ಆರಂಭವಾಗಿದ್ದು, ಡಿಸೆಂಬರ್ ಎರಡನೇ ವಾರದ ಹೊತ್ತಿಗೆ ಜಿಲ್ಲೆಯಲ್ಲಿ ಸಂಪೂರ್ಣ ರಾಗಿ ಕಟಾವು ಪ್ರಕ್ರಿಯೆ ಮುಕ್ತಾಯವಾಗಲಿದೆ. ಹೆಕ್ಟೇರ್‌ಗೆ ಸುಮಾರು 30 ಕ್ವಿಂಟಾಲ್ ಇಳುವರಿ ನಿರೀಕ್ಷೆ ಇದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ನೆಲಕಚ್ಚಿದರೂ ಹಾನಿ ಕಡಿಮೆ: ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ, ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿ ಸುತ್ತಮುತ್ತ ಮಳೆಯಿಂದಾಗಿ ರಾಗಿ ಬೆಳೆ ನೆಲಕ್ಕೆ ಬಾಗಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಆದರೂ ಜಿಲ್ಲೆಯಲ್ಲಿ ಎಲ್ಲಿಯೂ ಹೆಚ್ಚಿನ ರಾಗಿ ಸಲಿಗೆ ಹಾನಿಯಾಗಿಲ್ಲ ಎಂದು ಕೃಷಿ ಇಲಾಖೆ ತಿಳಿಸಿದೆ. ನಾಲ್ಕೈದು ವರ್ಷದಿಂದ ಮಳೆ ಕೊರತೆಯಿಂದ ನಿರೀಕ್ಷಿತ ರಾಗಿ ಸಲು ಇಲ್ಲದೆ ರೈತರು ಕಂಗೆಟ್ಟಿದ್ದರು. ಆದರೆ ಈ ಬಾರಿ ಉತ್ತಮ ಮಳೆಯಿಂದಾಗಿ ಜಿಲ್ಲೆಯಲ್ಲಿ ಹೆಚ್ಚಿನ ರಾಗಿ ಬಿತ್ತನೆ ನಡೆದಿತ್ತು. ಜತೆಗೆ ಕರೊನಾ ಲಾಕ್‌ಡೌನ್‌ನಿಂದ ಪಟ್ಟಣ ಪ್ರದೇಶಗಳಿಂದ ಗ್ರಾಮಗಳಿಗೆ ಮರಳಿದ ಅನೇಕರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಬೀಳು ಬಿದ್ದಿದ್ದ ಜಮೀನುಗಳಲ್ಲೂ ರಾಗಿ ಬೆಳೆಯಾಗಿದೆ.

ಕುಂದಾಣದಲ್ಲಿ ಹೆಚ್ಚು ಸಲು: ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿ ಜಿಲ್ಲೆಯಲ್ಲಿ ಅತಿ ಹೆಚ್ಚು ರಾಗಿ ಬೆಳೆಯುವ ಪ್ರದೇಶವಾಗಿದ್ದು, 3 ತಿಂಗಳ ಹಿಂದೆ ಕುಂದಾಣ ಹೋಬಳಿ ವ್ಯಾಪ್ತಿಯಲ್ಲಿ 1,100 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಮಾಡಲಾಗಿತ್ತು. ಈ ಭಾಗದ ಗ್ರಾಮಗಳಲ್ಲಿ ಉತ್ತಮ ಸಲಿನ ನಿರೀಕ್ಷೆ ಹೆಚ್ಚಾಗಿದೆ.

ಒಕ್ಕಣೆ ಯಂತ್ರಗಳ ಸದ್ದು: ಈಗಾಗಲೇ ಹಲವು ಕಡೆಗಳಲ್ಲಿ ರಾಗಿ ಕಟಾವು ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಕೃಷಿ ಯಂತ್ರಧಾರೆಯಡಿ ರಾಗಿ ಒಕ್ಕಣೆ ಯಂತ್ರಗಳು ಜಮೀನುಗಳಲ್ಲಿ ಸದ್ದು ಮಾಡುತ್ತಿವೆ. ತಮಿಳುನಾಡು ಕಡೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರಾಗಿ ಒಕ್ಕಣೆ ಯಂತ್ರಗಳು ಜಿಲ್ಲೆಯಲ್ಲಿ ಕಾರ್ಯನಿರತವಾಗಿವೆ. ಇದರೊಂದಿಗೆ ಮುಖ್ಯರಸ್ತೆಗಳಲ್ಲಿ ರೈತರು ಒಕ್ಕಣೆ ನಡೆಸುತ್ತಿರುವ ದೃಶ್ಯ ಕಂಡುಬರುತ್ತಿದೆ.

ಈಗಾಗಲೇ ಜಿಲ್ಲೆಯಲ್ಲಿ ಶೇ.70 ರಾಗಿ ಕಟಾವು ಮುಗಿದಿದ್ದು, ಇನ್ನೆರಡು ವಾರಗಳಲ್ಲಿ ಕಟಾವು ಪ್ರಕ್ರಿಯೆ ಸಂಪೂರ್ಣವಾಗಲಿದೆ. 41 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬೆಳೆಯಲಾಗಿದ್ದು, ಹೆಕ್ಟೇರ್‌ಗೆ ಸುಮಾರು 30 ಕ್ವಿಂಟಾಲ್ ರಾಗಿ ಸಲು ಪಡೆಯುವ ಅಂದಾಜು ಮಾಡಲಾಗಿದೆ. ಜಯಸ್ವಾಮಿ, ಜಂಟಿ ನಿರ್ದೇಶಕ, ಕೃಷಿ ಇಲಾಖೆ ಜಿಲ್ಲೆಯಲ್ಲಿ ಎಲ್ಲಿಯೂ ಬೆಳೆ ನಷ್ಟವಾಗಿರುವ ಬಗ್ಗೆ ವರದಿಯಾಗಿಲ್ಲ. ಜಡಿ ಮಳೆ ಜತೆಗೆ ಬಿಸಿಲೂ ಸಹ ಬರುತ್ತಿರುವುದರಿಂದ ಆತಂಕ ಕಡಿಮೆಯಾಗಿದೆ. ಜಡಿ ಮಳೆ ಆತಂಕದಿಂದ ಕೆಲ ರೈತರು ರಾಗಿ ಕಟಾವಿಗೆ ಹಿಂದೇಟು ಹಾಕುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಕಟಾವು ಪ್ರಕ್ರಿಯೆ ಮುಗಿಯಲಿದೆ. ವಿನುತಾ, ಸಹಾಯಕ ನಿರ್ದೇಶಕಿ, ಕೃಷಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net